ಸಾವಿರ ಸಾವಿರ ರೂ. ಉಳಿಸ್ತಿದೆ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಈ ಬೊಂಬಾಟ್‌ ಐಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀರಿನ ಪೋಲು ತಡೆಗಟ್ಟುವಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಅಳವಡಿಸಿಕೊಂಡಿರುವ ಸರಳ ತಂತ್ರಜ್ಞಾನವೊಂದು ಈಗ ಎಲ್ಲರ ಗಮನಸೆಳೆಯುತ್ತಿದೆ. ಕೇವಲ ನೀರು ಉಳಿಸುವಲ್ಲಿ ಮಾತ್ರವಲ್ಲ, ಸಾವಿರಾರು ರುಪಾಯಿಗಳ ಉಳಿತಾಯಕ್ಕೂ ತಂತ್ರಜ್ಞಾನ ನೆರವಾಗುತ್ತಿದೆ.

ಏನಿದು ಪ್ರಾಜೆಕ್ಟ್?

ಕಚೇರಿ ಆವರಣದಲ್ಲಿ 90 ಕೊಳಾಯಿಗಳಿಗೆ ಏರೇಟರ್ ಫಿಲ್ಟರ್ ಬಳಸಲಾಗಿದೆ. ಇದರಿಂದಾಗಿ ಒಟ್ಟು ಬಳಕೆಯ ಶೇಕಡಾ 20 ರಷ್ಟು ನೀರು ಉಳಿತಾಯವಾಗುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮಾಸಿಕ ನೀರಿನ ಬಿಲ್‌ನಲ್ಲಿ ರೂ 39,280 ಉಳಿಕೆಯಾಗುತ್ತದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನವೊಂದರಲ್ಲಿ ಮಾತನಾಡಿದ ಡಿಸಿಪಿ ನಿಶಾ ಜೇಮ್ಸ್, ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅಳವಡಿಸಿದ ತಂತ್ರಜ್ಞಾನ ಯಶಸ್ವಿಯಾದ್ದರಿಂದ ನಗರದ ಎಲ್ಲಾ 23 ಡಿಸಿಪಿ ಕಚೇರಿಗಳಲ್ಲಿ ಇದನ್ನು ಅನುಷ್ಠಾನಗೊಳಿಸಲು ಯೋಜಿಸಿದ್ದೇವೆ ಎಂದಿದ್ದಾರೆ. ಪೊಲೀಸ್‌ ವಸತಿಗೃಹದಲ್ಲಿ ವಾಸಿಸುವ ಸಿಬ್ಬಂದಿಯ ಕುಟುಂಬಗಳಿಗೆ ಕೂಡಾ ಈ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ತಿಳಿ ಹೇಳುತ್ತೇವೆ. ಇದರಿಂದ ನೀರು ಕಡಿಮೆ ಖರ್ಚಾಗುವುದರ ಜೊತೆಗೆ ವೆಚ್ಚವೂ ಕಡಿಮೆಯಾಗಲಿದೆ‌ ಎಂದು ಅವರು ಹೇಳಿದ್ದಾರೆ.

ಎಷ್ಟಾಗುತ್ತೆ ವೆಚ್ಚ?

ಏರಿಯೇಟರ್ ಅಳವಡಿಸಲು ಪ್ರತಿ ನಲ್ಲಿಗೆ ಕೇವಲ 68 ರೂ. ವೆಚ್ಚ ತಗುಲಿದೆ. 90 ನಲ್ಲಿಗಳಿಗೆ ಸೇರಿ ಒಟ್ಟು 6,120 ರೂ. ಖರ್ಚಾಗಿದೆ. ಇನ್ನು ಏಪ್ರಿಲ್‌ನಲ್ಲಿ 17.29 ಲಕ್ಷ ಲೀಟರ್ ನೀರು ಬಳಕೆಯಾಗಿದ್ದು, ಬಿಲ್ 1,90,846 ರೂ. ಆಗಿತ್ತು. ಈ ಹೊಸ ಹೆಜ್ಜೆಯಿಂದ ಮೇ ತಿಂಗಳ ನೀರಿನ ಬಳಕೆ 13.86 ಲಕ್ಷ ಲೀಟರ್‌ಗೆ ಕುಸಿದಿದೆ ಜೊತೆಗೆ ಬಿಲ್ 1,49,671 ರೂಪಾಯಿ ಮಾತ್ರ!

ಎಚ್‌ಎಸ್‌ಆರ್ ಲೇಔಟ್ ಮೂಲದ ಎವೆರಿಥಿಂಗ್ ಇಸಿಒ ಎನ್ವಿರೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ ಅವರಿಂದ ಈ ಸೇವೆ ಪಡೆಯಲಾಗಿದೆ. ಈ ವಿಧಾನ ಅಳವಡಿಸಿಕೊಳ್ಳುವುದರಿಂದ ಸಾಮಾನ್ಯ ಟ್ಯಾಪ್‌ನಲ್ಲಿ ನೀರಿನ ಹರಿವಿನಲ್ಲಿ 50% ಉಳಿಕೆಯಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಕರುಣ್ ಸಿ ಕಣವಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!