ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳು ಶುರುವಾಗಿದ್ದು, ಬೆಂಗಳೂರಿನ ಜನರಲ್ಲಿ ಆತಂಕ ಹುಟ್ಟಿಸಿವೆ. ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಕರುಳು ಬೇನೆ (Gastrointestinal disorders) ಹಾಗೂ ಫುಡ್ ಪಾಯ್ಸನ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿವೆ.
ಆರೊಗ್ಯ ಇಲಾಖೆ ನಿರ್ದೇಶಕ ಅಹ್ಮದ್ ಅನ್ಸಾರ್ ಈ ಕುರಿತು ಮಾತನಾಡಿ, ಹವಾಮಾನ ಬದಲಾವಣೆ ಇತ್ತೀಚೆಗೆ ಸುರಿದ ಮಳೆ ಹಾಗೂ ಬಿಸಲಿನ ತಾಪಮಾನ ಏರಿಕೆಯಿಂದ ಕರಳು ಬೇನೆ ಗ್ಯಾಸ್ಟ್ರೋ ಎಂಟರೈಟಿಸ್ ಸೇರಿದಂತೆ ಕರುಳು ಸಂಬಂಧಿ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ.
ವೈದ್ಯರು ಎಚ್ಚರಿಕೆ ಅತ್ಯಗತ್ಯ ಅಂತಿದ್ದು ಮಳೆ ನೀರು ನಿಂತು ಸಂಗ್ರಹವಾಗಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳು ಹೆಚ್ಚಿದ್ದು, ಇವುಗಳಿಂದಲೂ ಸಾಂಕ್ರಾಮಿಕ ರೋಗ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ರಾಜಧಾನಿಯ ಜನರು ಬೇಸಿಗೆ ಮುಗಿಯುವವರೆಗೂ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಕಳೆದ 10 ದಿನಗಳಲ್ಲಿ 5,500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಂದು ವಾರದಲ್ಲಿ 274 ಮೈಕೈ ನೋವು, ನೆಗಡಿ, ಜ್ವರಗಳಿಂದ ಕೂಡಿದ, ತೀವ್ರ ಸಾಂಕ್ರಾಮಿಕವಾದ ವೈರಸ್ ರೋಗಳು ಪತ್ತೆಯಾಗಿವೆ. ಹೀಗಾಗಿ, ಆರೋಗ್ಯ ಇಲಾಖೆ ಈ ಖಾಯಿಲೆಗಳ ಬಗ್ಗೆ ಹೈ ಅಲರ್ಟ್ ಆಗಿದ್ದು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದು ಇಲಾಖೆ ಎಚ್ಚರಿಕೆ ನೀಡಿದೆ.