ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪುನೀತ್ ರಾಜ್ ಕುಮಾರ್ ಅಗಲಿಕೆಯ ಆಘಾತದ ನೋವು ಇನ್ನು ಕೂಡ ಮಾಸಿಲ್ಲ. ಇನ್ನು ಈ ಪ್ರತಿಭೆ, ಅದ್ಭುತ ಕಲಾವಿದನ ನೆನಪಿಗಾಗಿ ಇದೀಗ 12 ಕಿ.ಮೀ. ಉದ್ದದ ವರ್ತುಲಾ ರಸ್ತೆಗೆ ಪುನೀತ್ ಹೆಸರಿಡಲು ಅನುಮೋದನೆ ಲಭಿಸಿದೆ.
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ಅಧಿಕೃತ ಅನುಮೋದನೆ ನೀಡಿದೆ.
ಪುನೀತ್ ಹೆಸರು ನಾಮಕರಣ ಮಾಡುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಇದರಂತೆ ಈ ವ್ಯಾಪ್ತಿಯ ಸಾರ್ವಜನಿಕರಿಂದ ಆಕ್ಷೇಪಣೆಗಳ ಮಹಜರ್ ನಡೆಸಲಾಗಿದ್ದು, ಸುಮಾರು 700 ಕ್ಕೂ ಹೆಚ್ಚು ಮಂದಿ ಈ ರಸ್ತೆಗೆ ಅಪ್ಪು ಅವರ ಹೆಸರಿಡುವ ಪರವಾಗಿ ಸಹಿ ಮಾಡಿದ್ದಾರೆ.
ಶೀಘ್ರವಾಗಿ ಮುಖ್ಯಮಂತ್ರಿಗಳಿಂದ ಪುನೀತ್ ರಾಜ್‍ಕುಮಾರ್ ರಸ್ತೆಯ ನಾಮಕರಣ ಸಮಾರಂಭವನ್ನು ರಾಜ್ ಕುಟುಂಬದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ನಡೆಸಲಾಗುತ್ತದೆ.