October 10, 2026
Saturday, October 10, 2026
spot_img

ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ : ಆಟೋ ಸೀಟ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಟೋ ಸೀಟ್ ವಿಚಾರಕ್ಕೆ ನಡೆದ ಗಲಾಟೆಯೊಂದು ಓರ್ವನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದೆ.

ಮುಬಾರಕ್ ಎಂಬಾತ (26) ಮೃತ ದುರ್ದೈವಿ. ಇದೇ ಮೇ 1ರಂದು ಆರೋಪಿ ತಬ್ರೇಜ್ (46) ಎಂಬಾತ ಮುಬಾರಕ್‌ನ ಆಟೋ ಸೀಟ್ ತೆಗೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡಿದ್ದರು. ಈ ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಮಧ್ಯಪ್ರವೇಶಿಸಿ, ಇಬ್ಬರನ್ನೂ ಸಮಾಧಾನಪಡಿಸಿದ್ದರು.

ಬಳಿಕ ಮತ್ತೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಈ ವೇಳೆ ಆರೋಪಿ ತಬ್ರೇಜ್ ಮರದ ತುಂಡಿನಿಂದ ಮುಬಾರಕ್‌ನ ತಲೆಯ ಮೇಲೆ ಜೋರಾಗಿ ಹೊಡೆದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಮುಬಾರಕ್ ಕುಸಿದು ಬಿದ್ದಿದ್ದ. ತಕ್ಷಣವೇ ಈತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಮುಬಾರಕ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಮೃತ ಮುಬಾರಕ್‌ಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ ಎಂದು ತಿಳಿದು ಬಂದಿದೆ. ಸದ್ಯ ಈ ಘಟನಾ ಸಂಬಂಧ ಜಗಜೀವನರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ತಬ್ರೇಜ್‌ನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

Must Read