ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಭಾರತದ ಪ್ರತಿಷ್ಠಿತ ಹಾಗೂ ಹೆಮ್ಮೆಯ ಪರಂಪರೆ ಹೊಂದಿರುವ ಮತ್ತು ಭವಿಷ್ಯದ ಭರವಸೆಯ ಬೆಳಕು ಮೂಡಿಸಿರುವ ಬಹು ಬೇಡಿಕೆಯ ತಂತ್ರಜ್ಞಾನ ಕಾರ್ಯಕ್ರಮ ಬೆಂಗಳೂರು ಟೆಕ್ ಸಮ್ಮಿಟ್ (ಬಿಟಿಎಸ್) 25ನೇ ಆವೃತ್ತಿ ಈ ವರ್ಷ ನವೆಂಬರ್ 16ರಿಂದ 18ರವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ. ಬಿಟಿಎಸ್ ಬೆಳ್ಳಿಹಬ್ಬದ ಆವೃತ್ತಿಯ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನಿಸಲಾಗಿದೆ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ಸ್ಪಾರ್ಟ್ ಅಪ್ ವಲಯದ 100ಕ್ಕೂ ಹೆಚ್ಚು ನಾಯಕರು ಹಾಗೂ ಸಿಇಒಗಳೊಂದಿಗೆ ಸಂವಾದ ನಡೆಸಿದರು. ಈ ಬೆಳ್ಳಿಹಬ್ಬದ ಆವೃತ್ತಿಯನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆಲೋಚನೆಗಳು ಹಾಗೂ ಅಭಿಪ್ರಾಯಗಳನ್ನು ವಿವಿಧ ವಲಯಗಳ ನಾಯಕರು ಈ ಸಂದರ್ಭದಲ್ಲಿ ಹಂಚಿಕೊಂಡರು.
ಇನ್ನೂ ಹೆಚ್ಚಿನ ಸಂಖ್ಯೆಯ ಇನ್ನೊವೇಶನ್ (ನಾವಿನ್ಯತೆಯ) ಕ್ಲಸ್ಟರ್‌ಗಳನ್ನು ಸೃಷ್ಟಿಸುವುದು, ಕಟ್ಟಿಂಗ್-ಎಡ್ಜ್ ಸಂಶೋಧನೆಗಳ ಮೇಲೆ ಹೆಚ್ಚು ಗಮನಹರಿಸುವುದು ಹಾಗೂ ಜಾಗತಿಕ ಮಟ್ಟದ ಅತ್ಯುನ್ನತ ಸಂಶೋಧನಾ ವಲಯವನ್ನು ಆಕರ್ಷಿಸುವುದು, ಪ್ರತಿಭಾವಂತರಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು, ಬಿಯಾಂಡ್ ಬೆಂಗಳೂರು ಕಾರ್ಯಕ್ರಮಕ್ಕೆ ಮತ್ತಷ್ಟು ಶಕ್ತಿ ತುಂಬುವುದು, ರಿಸ್ಟ್ ಕ್ಯಾಪಿಟಲ್‌ಗೆ ಇನ್ನೂ ಉತ್ತಮವಾದ ಆಕ್ಸೆಸ್, ಜಾಗತಿಕ ಮಟ್ಟದ ಸಂಪರ್ಕಗಳನ್ನು ಕಲ್ಪಿಸುವುದು ಮತ್ತು ಇನ್ನೂ ಹೆಚ್ಚಿನ ಜಿಸಿಸಿಗಳನ್ನು ಆಕರ್ಷಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದರು.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು, ಈ ಬಾರಿ 2022ರ ನವೆಂಬರ್ 16ರಿಂದ 18ರವರೆಗೆ ಬೆಂಗಳೂರು ಅರಮನೆಯಲ್ಲಿ ಬೆಂಗಳೂರು ಟೆಕ್ ಸಮಿಟ್ ಭೌತಿಕವಾಗಿ ನಡೆಯಲಿದೆ. ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಘೋಷಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್‌ನ ರಜತ ಪಥ
1998ರಲ್ಲಿ ಬೆಂಗಳೂರು ಐಟಿ.ಕಾಂ ಮತ್ತು 2001ರಲ್ಲಿ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬೆಂಗಳೂರು ಬಯೋ ಹೆಸರಿನ ಕಾರ್ಯಕ್ರಮ ಆಯೋಜಿಸಿದ ಬೆಂಗಳೂರು, ಐಟಿ-ಬಿಟಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ದೇಶದ ಮೊಟ್ಟಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜಾಗತಿಕ ಮಟ್ಟದ ಐಟಿ ಹಾಗೂ ಜೈವಿಕ ತಂತ್ರಜ್ಞಾನ ಸಮೂಹವು ಭಾರತದೊಂದಿಗೆ ಸಂಪರ್ಕ ಕಲಿಸುವಲ್ಲಿ ಯಶಸ್ವಿಯಾಗಿರುವ ಈ ಕಾರ್ಯಕ್ರಮಗಳು, ಬಹು ಬೇಡಿಕೆಯ ಕಾರ್ಯಕ್ರಮಗಳಾಗಿ ಗುರುತಿಸಿಕೊಂಡಿವೆ. ಈ ಕಾರ್ಯಕ್ರಮಗಳ ಮೂಲಕ ಬೆಂಗಳೂರು ನಗರವನ್ನು ಭಾರತದ ಐಟಿ ಮತ್ತು ಜೈವಿಕ ತಂತ್ರಜ್ಞಾನ ರಾಜಧಾನಿಯನ್ನಾಗಿ ರೂಪಿಸುವಲ್ಲಿ ಕರ್ನಾಟಕ ಸರಕಾರ ಯಶಸ್ವಿಯಾಗಿದೆ. 2017ರಲ್ಲಿ ಈ ಎರಡೂ ಕಾರ್ಯಕ್ರಮಗಳು ಬೆಂಗಳೂರು ಟೆಕ್ ಸಮ್ಮಿಟ್ ಹೆಸರಿನ ಕಾರ್ಯಕ್ರಮದ ಮೂಲಕ ಒಂದೇ ಸೂರಿನ ಅಡಿಯಲ್ಲಿ ಬಂದಿದ್ದು, ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳನ್ನು ಒಗ್ಗೂಡಿಸುವ ಒಂದು ವಿಶಿಷ್ಟ ವೇದಿಕೆಯಾಗಿ ಬೆಳೆದು ನಿಂತಿದೆ.
ಈ ವರ್ಷ ಬಿಟಿಎಸ್ 2022 ತನ್ನ 25ನೇ ವರ್ಷದ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಪ್ರತಿಷ್ಠಿತ ಕಂಪನಿಗಳು, ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ, ಡೀಪ್, ಟೆಕ್ ಹಾಗೂ ಇನ್ನಿತರ ಭವಿಷ್ಯದ ತಂತ್ರಜ್ಞಾನಗಳ ಸಂಗಮಕ್ಕೆ ವೇದಿಕೆ ಒದಗಿಸಲು ಸರ್ವ ಸನ್ನದ್ಧವಾಗಿದೆ. ಉದ್ಯಮದ ನಾಯಕರು, ತಂತ್ರಜ್ಞರು, ಯುವ ನವೋದ್ಯಮಿಗಳು, ಹೂಡಿಕೆದಾರರು, ಆರ್ ಎಂಡ್ ಡಿ ವೃತ್ತಿಪರರು, ಶೈಕ್ಷಣಿಕ ಮತ್ತು ನೀತಿ ನಿರೂಪಕರು ಸೇರಿದಂತೆ ಆಯಾ ವಲಯಗಳಿಗೆ ಸಂಬಂಧಿಸಿದ ವಿವಿಧ ಪಾಲುದಾರರಿಗೆ ಪ್ರಯೋಜನಗಳನ್ನು ಒದಗಿಸಲು ಈ ಸಮ್ಮೇಳನವು ಸಿದ್ಧವಾಗಿದೆ.
ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್‌ನ ಡಾ. ಕಿರಣ್ ಮಜುಂದಾರ್-ಶಾ, ಸ್ಪಾರ್ಟ್-ಅಪ್ ವಿಷನ್ ಗ್ರೂಪ್‌ನ ಪ್ರಶಾಂತ್ ಪ್ರಕಾಶ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಬಿ.ವಿ. ನಾಯ್ಡು, ಕರ್ನಾಟಕ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ ಎಂಡ್ ಟಿ ಇಲಾಖೆಯ ಎಸಿಎಸ್ ಡಾ. ರಮಣ ರೆಡ್ಡಿ, ಎಬಿಎಲ್‌ಇ ಅಧ್ಯಕ್ಷ ಜಿ.ಎಸ್. ಕೃಷ್ಣನ್ ಮುಂತಾದವರಿದ್ದರು.