ಹೊಸದಿಗಂತ ಡಿಜಿಟಲ್ ಡೆಸ್ಕ್
ಹೂಡಿ ಯದು ಅಯ್ಯಪ್ಪನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ರಾತ್ರೋರಾತ್ರಿ ಅಗೆದು ಹಾಕಲಾಗಿದ್ದ ಗುಂಡಿಯನ್ನು ಸ್ಥಳೀಯರೊಂದಿಗೆ ಸೇರಿ ಬೆಂಗಳೂರು ಸಂಚಾರ ಪೊಲೀಸರು ಮುಚ್ಚಿದ್ದಾರೆ.
ಯಾವುದೇ ಅನುಮತಿಯಿಲ್ಲದೆ ರಾತ್ರೋರಾತ್ರಿ ರಸ್ತೆಯನ್ನು ಅಗೆಯಲಾಗಿದೆ. ರಸ್ತೆ ಮುಚ್ಚಲು ಬಿಬಿಎಂಪಿ ಸಹಾಯವನ್ನು ಕೋರಿದರೂ ಯಾವುದೇ ಸಹಕಾರ ಸಿಗಲಿಲ್ಲ ಎಂದು ಟ್ರಾಫಿಕ್ ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.
ʼಹೂಡಿಯಿಂದ ಅಯ್ಯಪ್ಪನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗೆದು ಹಾಕಿದ್ದರಿಂದ ನೌಕರರು ಹಾಗೂ ಶಾಲೆಗೆ ತೆರಳುವವ ಮಕ್ಕಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. “ದಯವಿಟ್ಟು ಹೂಡಿ- ಅಯ್ಯಪ್ಪನಗರ ರಸ್ತೆಯತ್ತ ಬರುವುದನ್ನು ತಪ್ಪಿಸಿ. ಯಾರೋ ಅನುಮತಿ ಇಲ್ಲದೇ ರಸ್ತೆಯನ್ನು ಹೀಗೆ ಅಗೆದು ಬಿಟ್ಟಿದ್ದಾರೆ. ನಾವು ಅದನ್ನು ಮುಚ್ಚುತ್ತಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆʼ ಎಂದು ಕೆಆರ್ ಪುರಂ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.
“ರಸ್ತೆಯನ್ನು ಹೀಗೆ ಅಗೆದು ಬಿಡುವುದು ಸರಿಯೇ? ಇದು ಇಡೀ ಪ್ರದೇಶದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಿದೆ… ಇದನ್ನು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆಯೇ?” ಎಂದು ಜನರು ಕಾಮೆಂಟ್ ಗಳ ಮೂಲಕ ಕಿಡಿಕಾರಿದ್ದಾರೆ.
ರಸ್ತೆಯ ಮಧ್ಯಭಾಗದಲ್ಲಿ ಹೊಂಡ ವ್ಯಾಪಿಸಿದ್ದು, ದ್ವಿಚಕ್ರ ವಾಹನಗಳಿಗೂ ಸಂಚರಿಸಲು ತೊಂದರೆಯಾಗಿದೆ. ನಗರದಲ್ಲಿ ಮೊದಲೇ ಸುರಿದ ಮಳೆಯಿಂದಾಗಿ ರಸ್ತೆ ಕೆಸರು ಮತ್ತು ಜಾರುವಂತಾಗಿತ್ತು ಆಗಿತ್ತು. ಈಗ ರಸ್ತೆಯನ್ನು ಅಗೆದು ಬಿಟ್ಟಿದರಿಂದ ಪ್ರಯಾಣಿಕರು ಪಡಿಪಾಟಲು ಪಟ್ಟಿದ್ದಾರೆ. “ಇದು ಬಿಬಿಎಂಪಿ, ಬಿಡಬ್ಲುಎಸ್‌ಎಸ್‌ಬಿ ಅಥವಾ ಬೆಸ್ಕಾಂ ಕೆಲಸ ಆಗಿರಬಹುದು, ನಮಗೆ ಖಚಿತವಿಲ್ಲ. ಅದನ್ನು ನಾವು ಕಂಡುಕೊಳ್ಳುತ್ತೇವೆ, ”ಎಂದು ಸಂಚಾರ ಪೊಲೀಸರು ಪ್ರಶ್ನೆಗೆ ಉತ್ತರಿಸಿದ್ದಾರೆ.