ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಯಾಲಿಕಾವಲ್‌ನಲ್ಲಿ ನಡೆದಿದ್ದ ಮಹಾಲಕ್ಷ್ಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಣಿಗೆ ಶರಣಾಗಿದ್ದ ಹಂತಕ ಕೊನೆ ಕ್ಷಣದಲ್ಲಿ ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಈ ಡೆತ್ ನೋಟ್ ನಿಂದ ಹತ್ಯೆಯ ಕಾರಣ ಬಹಿರಂಗವಾಗಿದೆ.
ಮಹಿಳೆ ಕೊಲೆ ಪ್ರಕರಣದಲ್ಲಿ ಒರಿಸ್ಸಾ ಮೂಲದ ಮುಕ್ತಿ ರಂಜನ್ ರಾಯ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದ ಮಾಲ್ ನಲ್ಲಿ ಸ್ಟೋರ್ ಮ್ಯಾನೇಜರ್ ಆಗಿದ್ದ ಈತನೂ ಕೆಲಸ ಮಾಡುತ್ತಿದ್ದ. ಮಹಾಲಕ್ಷ್ಮೀ ನಾಪತ್ತೆಯಾಗಿದ್ದ ದಿನದಿಂದಲೂ ಈತ ಕೂಡ ನಾಪತ್ತೆಯಾಗಿದ್ದ. ಹೀಗಾಗಿ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು.
ಆತನಿಗಾಗಿ ಹಲವು ಕಡೆ ಹುಡುಕಾಡಿದ್ದ ಪೊಲೀಸರಿಗೆ ಆತ ಒಡಿಶಾಗೆ ತೆರಳಿರೊ ಮಾಹಿತಿ ಸಿಕ್ಕಿತ್ತು. ಸಿಕ್ಕ ಮಾಹಿತಿ ಆಧರಿಸಿ ಒಡಿಶಾದೆ ತೆರಳಿದ್ದ ಪೊಲೀಸರಿಗೆ ರಂಜನ್ ರಾಯ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ. ಆರೋಪಿಯ ಸ್ಮಶಾನದ ಬಳಿಯಿರುವ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ನಡುವೆ ಆರೋಪಿ ಬಳಿ ಡೈರಿಯೊಂದು ಪತ್ತೆಯಾಗಿದ್ದು, ಡೈರಿ ಮೂಲಕ ಹತ್ಯೆಯ ಹಿಂದಿನ ಸತ್ಯ ಬಹಿರಂಗಗೊಂಡಿದೆ.
ಸೆಪ್ಟಂಬರ್ 3ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಮಹಾಲಕ್ಷ್ಮೀ ಹತ್ಯೆ ಕುರಿತು ರಂಜನ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.ಸೆಪ್ಟಂಬರ್ 3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದಾಗಿ ಬರೆದಿದ್ದಾನೆ. ಅಲ್ಲದೆ, ಹತ್ಯೆ ಬಳಿಕ ಹೆಬ್ಬಗೋಡಿಯಲ್ಲಿ ನೆಲೆಸಿರುವ ತನ್ನ ಸಹೋದರನಿಗೆ ಕರೆ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾನೆ. ಆರೋಪಿ ರಂಜನ್ ಅವಿವಾಹಿತನಾಗಿದ್ದು, ಮಹಾಲಕ್ಷ್ಮೀಯನ್ನು ಮದುವೆಯಾಗುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ, ಮಹಾಲಕ್ಷ್ಮೀ ಮದುವೆಯಾಗುವಂತೆ ನಿರಂತರವಾಗಿ ಪೀಡಿಸುತ್ತಿದ್ದು ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಅಲ್ಲದೆ, ಮಹಾಲಕ್ಷ್ಮೀ ರಂಜನ್ ಮೇಲೆ ಕೈ ಮಾಡಿದ್ದು, ಇದರಿಂದ ಕೋಪಗೊಂಡು ಆಕೆಯನ್ನು ಹತ್ಯೆ ಮಾಡಿರುವುದಾಗಿ ಹಾಗೂ ಹತ್ಯೆ ಬಳಿಕ ಮೃತದೇಹವನ್ನು 59 ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇರಿಸಿರುವುದಾಗಿ ಬಹಿರಂಗಪಡಿಸಿದ್ದಾನೆ.