January21, 2026
Wednesday, January 21, 2026
spot_img

ಬೆಂಗಳೂರಿಗರೇ ಕಂಡಕಂಡಲ್ಲಿ ಕಸ ಎಸಿತೀರಾ? ಹುಷಾರ್..! ನಿಮ್ಮ ಮನೆ ಮುಂದೇನೆ ಬೀಳುತ್ತೆ ರಾಶಿ ತ್ಯಾಜ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರವನ್ನು ಸ್ವಚ್ಛವಾಗಿ ಇಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇದೀಗ ಕಸ ಎಸೆಯುವವರ ವಿರುದ್ಧ ಹೊಸ ಹಾಗೂ ಕಠಿಣ ಕ್ರಮ ಕೈಗೊಂಡಿದೆ. ಎಚ್ಚರಿಕೆಗಳು, ಜನಜಾಗೃತಿ ಅಭಿಯಾನಗಳು, ಹಾಗೂ ದಂಡಗಳ ಬಳಿಕವೂ ಅನೇಕರು ಎಲ್ಲೆಂದರಲ್ಲಿ ಕಸ ಎಸೆಯುವ ಅಭ್ಯಾಸ ಬಿಡದ ಕಾರಣ, ಈಗ ಅಧಿಕಾರಿಗಳು ನೇರ ಕ್ರಮಕ್ಕೆ ಮುಂದಾಗಿದ್ದಾರೆ.

ಇದರಿಂದ ಮುಂದೆ ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ, ಅವರ ಮನೆ ಪತ್ತೆಹಚ್ಚಿ ಅದೇ ಕಸವನ್ನು ಅವರ ಮನೆ ಮುಂದೆಯೇ ಸುರಿಯಲಾಗುತ್ತದೆ. ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ. ಮಾರ್ಷಲ್‌ಗಳು ಮೊದಲು ಕಸ ಎಸೆಯುವವರ ವಿಡಿಯೋ ದೃಶ್ಯಗಳನ್ನು ಸೆರೆಹಿಡಿಯಲಿದ್ದು, ಆ ನಂತರ ಸ್ಥಳೀಯ ಪೊಲೀಸರ ಸಹಾಯದಿಂದ ಮನೆ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಿದ್ದಾರೆ. ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ಕಸ ಎಸೆಯುವವರನ್ನು ಸಾರ್ವಜನಿಕವಾಗಿ ಬಯಲಿಗೆಳೆಯುವ ಯೋಜನೆಯೂ ಇದೆ.

ಕಳೆದ ಒಂದು ವಾರದಿಂದಲೇ ಈ ಕಾರ್ಯಾಚರಣೆ ಪ್ರಾರಂಭವಾಗಿದ್ದು, ವಿಂಗಡಣೆ ಮಾಡದ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಪ್ಯಾಕೇಜಿಂಗ್ ಕಸದ ವಿರುದ್ಧ ಗಮನಹರಿಸಲಾಗಿದೆ. ಕಸ ಸುರಿಸಿದ ನಂತರ ಕೆಲವು ಗಂಟೆಗಳ ಬಳಿಕ ಅದನ್ನು ತೆರವುಗೊಳಿಸಲಾದರೂ, ತಪ್ಪಿತಸ್ಥರು 2,000ರಿಂದ 10,000 ರೂ.ವರೆಗಿನ ದಂಡವನ್ನು ಪಾವತಿಸಲೇಬೇಕು.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ನಗರವನ್ನು ಕ್ಲೀನ್‌ ಹಾಗೂ ಗ್ರೀನ್‌ ಆಗಿ ಉಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅದರ ಭಾಗವಾಗಿ ಈ ಹೊಸ ಕ್ರಮ ಜಾರಿಗೆ ಬಂದಿದೆ.

Must Read