ಐಸಿಸಿ ಪ್ರಕಟಿಸಿದ ಅತ್ಯುತ್ತಮ ಟಿ20 ವಿಶ್ವಕಪ್ ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರೀಡಾಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್‌ ಹುಟ್ಟುಹಾಕಿದ್ದ ಐಸಿಸಿ ಟಿ. 20 ವಿಶ್ವಕಪ್‌ ಗೆ ಅದ್ಧೂರಿ ತೆರೆಬಿದ್ದಿದೆ. ಇಂಗ್ಲೆಂಡ್‌ ತಂಡ ವಿಶ್ವ ಚಾಂಪಿಯನ್ನರಾಗಿ ಹೊರಹೊಮ್ಮಿದೆ. ಇದೀಗ ಐಸಿಸಿ ವಿಶ್ವಕಪ್‌ ನಲ್ಲಿ ಅತ್ಯುತ್ತಮವಾಗಿ ಆಡಿದ ಆಟಗಾರರನ್ನು ಸೇರಿಸಿ ಐಸಿಸಿ ಟೂರ್ನಮೆಂಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಚಾಂಪಿಯನ್‌ ಇಂಗ್ಲೆಂಡ್‌ ನ ನಾಲ್ವರು ಆಟಗಾರರಿದ್ದರೆ, ಭಾರತದ ಇಬ್ಬರು ಆಟಗಾರು ಸ್ಥಾನಪಡೆದಿದ್ದಾರೆ. ಪಾಕಿಸ್ತಾನದ ಇಬ್ಬರು,  ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್ ನ ತಲಾ ಒಬ್ಬ ಆಟಗಾರ ಸ್ಥಾನಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ವಿರುದ್ಧದ ಸೆಮಿಫೈನಲ್‌ನಲ್ಲಿ 47 ಎಸೆತಗಳಲ್ಲಿ ಅಜೇಯ 86 ರನ್‌ ಸೇರಿದಂತೆ ಇಂಗ್ಲೆಂಡ್‌ನ ಪಂದ್ಯಾವಳಿಯಲ್ಲಿ ಉತ್ತಮ ಇನ್ನಿಂಗ್ಸ್‌ ಕಟ್ಟಿದ ಅಲೆಕ್ಸ್‌ ಹೇಲ್ಸ್‌ ಆರಂಭಿಕನಾಗಿ ಸ್ಥಾನ ಪಡೆದಿದ್ದಾರೆ. ಅವರು ಈ ಈ T20 ವಿಶ್ವಕಪ್‌ನಲ್ಲಿ 212 ರನ್ ಸಿಡಿಸಿ ಇಂಗ್ಲೆಂಡ್‌ನ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮೂಡಿಬಂದಿದ್ದರು.
ಸೆಮಿಫೈನಲ್‌, ಫೈನಲ್‌ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಇಂಗ್ಲೆಂಡ್ ನಾಯಕ ಜೋಸ್‌ ಬಟ್ಲರ್ (225 ರನ್‌) ಅವರನ್ನು ಐಸಿಸಿ ತಂಡದ ನಾಯಕರಾಗಿ ಆಯ್ಕೆಮಾಡಲಾಗಿದೆ. 6 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದ ಸ್ಯಾಮ್ ಕರನ್ ಜೊತೆಗೆ 4 ಪಂದ್ಯಗಳಲ್ಲಿ 9 ವಿಕೆಟ್ ಪಡೆದ ಮಾರ್ಕ್ ವುಡ್ ಕೂಡ ಸ್ಥಾನ ಪಡೆದಿದ್ದಾರೆ.
ಈ T20 ವಿಶ್ವಕಪ್‌ನಲ್ಲಿ 296 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿರಾಟ್‌ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಪಾಕಿಸ್ತಾನದ ವಿರುದ್ಧ 82* ರನ್ನುಗಳ ಮಾಂತ್ರಿಕ ಇನ್ನಿಂಗ್ಸ್‌ ಸೇರಿದಂತೆ ನಾಲ್ಕು ಅರ್ಧಶತಕಗಳನ್ನು ಹೊಡೆದಿದ್ದಾರೆ. ಜೊತೆಗೆ ಟೂರ್ನಿಯಲ್ಲಿ ಅದ್ಭುತ ಇನ್ನಿಂಗ್ಸ್‌ ಗಳನ್ನು ಆಡಿದ ಸೂರ್ಯಕುಮಾರ್‌ ಯಾದವ್‌ ಅವರಿಗೂ ಐಸಿಸಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಸಿಕ್ಕಿದೆ.
ಪಾಕ್‌ ಪರ ಆಡಿದ 7 ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿ ಬ್ಯಾಟಿಂಗ್‌ ನಲ್ಲೂ ಗಮನಾರ್ಹ ಪ್ರದರ್ಶನ ತೋರಿದ  ಲೆಗ್ ಸ್ಪಿನ್ನರ್  ಶಾದಾಬ್ ಖಾನ್ ಹಾಗೂ 7 ಪಂದ್ಯಗಳಲ್ಲಿ 11 ವಿಕೆಟ್ ಪಡೆದ ಶಾಹೀನ್ ಶಾ ಆಫ್ರಿದಿ ಸ್ಥಾನ ಪಡೆದಿದ್ದಾರೆ.
ಟೂರ್ನಿಯುದ್ಧಕ್ಕೂ ಅದ್ಧೂರಿ ಪ್ರದರ್ಶನ ತೋರಿದ ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಜಾ ಆಲ್ರೌಂಡರ್‌ ರೂಪದಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ 219 ರನ್‌ಗಳನ್ನು ಗಳಿಸಿರುವ ರಜಾ 10 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. 5 ಪಂದ್ಯಗಳಲ್ಲಿ 11 ವಿಕೆಟ್ ಪಡೆದ ಸೌತ್‌ ಆಫ್ರಿಕಾದ ಎನ್ರಿಕ್ ನೋಕಿಯಾ, ನ್ಯೂಜಿಲೆಂಡ್ ಪರ 201 ರನ್ ಕಲೆಹಾಕಿದ ಗ್ಲೆನ್ ಫಿಲಿಪ್ಸ್ ತಂಡದಲ್ಲಿ ಸ್ಥಾನ ಪಡೆದ ಇತರರು.

ಐಸಿಸಿ ಬೆಸ್ಟ್ ಟಿ20 ವಿಶ್ವಕಪ್ ತಂಡ:
ಜೋಸ್ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಗ್ಲೆನ್ ಫಿಲಿಪ್ಸ್, ಸಿಕಂದರ್ ರಜಾ, ಶಾದಾಬ್ ಖಾನ್, ಸ್ಯಾಮ್ ಕರನ್, ಎನ್ರಿಕ್ ನೋಕಿಯಾ, ಮಾರ್ಕ್ ವುಡ್, ಶಾಹೀನ್ ಶಾ ಆಫ್ರಿದಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!