ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಅಪರಾಧಿಗಳು ಮತ್ತೆ ತಂತ್ರ ಬದಲಿಸಿ ಜನರನ್ನು ವಂಚಿಸುತ್ತಿದ್ದಾರೆ. ಇತ್ತೀಚೆಗೆ ಸಂಸದೆಯ ಪತ್ನಿಗೆ ಮನಿಲ್ಯಾಂಡ್ರಿಂಗ್ ಹೆಸರಿನಲ್ಲಿ ಲಕ್ಷಾಂತರ ಹಣ ದೋಚಿದ್ದ ವಂಚಕರು, ಇದೀಗ ನಗರದ ಪ್ರಮುಖ ಮಹಿಳಾ ವಿಜ್ಞಾನಿಯೊಬ್ಬರನ್ನು ಗುರಿಯಾಗಿಸಿಕೊಂಡಿದ್ದಾರೆ. ಮಾನವ ಕಳ್ಳಸಾಗಣಿಕೆ ಪ್ರಕರಣದಲ್ಲಿ ನಿಮ್ಮ ಹೆಸರು ಸೇರಿದೆ ಎಂಬ ಬೆದರಿಕೆಯೊಡ್ಡಿ ಅವರಿಂದ ಲಕ್ಷಾಂತರ ರೂಪಾಯಿ ದೋಚಿದ್ದಾರೆ.
ಐಐಎಸ್‌ಸಿಯ ನ್ಯೂ ಹೌಸಿಂಗ್ ಕಾಲೋನಿಯಲ್ಲಿ ವಾಸಿಸುತ್ತಿರುವ ವಿಜ್ಞಾನಿ ಡಾ. ಸಂಧ್ಯಾ ಅವರಿಗೆ ಸೆಪ್ಟೆಂಬರ್ 16ರಂದು ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿತ್ತು. “ನಿಮ್ಮ ಮೊಬೈಲ್ ನಂಬರ್‌ನ್ನು ಬೇರೆ ಕಡೆ ದುರುಪಯೋಗ ಮಾಡಲಾಗಿದೆ, ನಿಮ್ಮ ವಿರುದ್ಧ 17 ಪ್ರಕರಣಗಳು ದಾಖಲಾಗಿವೆ” ಎಂದು ಮೆಸೇಜ್ ಕಳುಹಿಸಲಾಗಿತ್ತು. ಬಳಿಕ ಮತ್ತೊಬ್ಬರು ಕರೆ ಮಾಡಿ “ನೀವು ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ, ಸುಪ್ರೀಂ ಕೋರ್ಟ್ ದಾಖಲೆಗಳ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಬಂಧಿಸಲಿದ್ದಾರೆ” ಎಂದು ಬೆದರಿಕೆ ಹಾಕಿ ಡಾ. ಸಂಧ್ಯಾ ಅವರ ಖಾತೆಯಿಂದ ಒಟ್ಟು 8.8 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಈ ಕುರಿತು ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸೈಬರ್ ವಂಚಕರನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.