ಹೊಸ ದಿಗಂತ ವರದಿ, ನಾಗಮಂಗಲ :
ನಮ್ಮ ಅಂತರಂಗದ ಕೊಳೆಯನ್ನು ಕಳೆಯಲು ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ಮನುಷ್ಯ ರೂಪದಲ್ಲಿ ಅವತರಿಸಿ ಬಂದು ಇಡೀ ಸಮಾಜವನ್ನು ಉದ್ಧರಿಸಿದ್ದಾರೆ. ಇಂತಹ ಶ್ರೇಷ್ಠ ಗುರುಗಳನ್ನು ಪಡೆದಿರುವ ನಾವೆಲ್ಲರೂ ಅರಿವಿನ ಮಹಾಮನೆಯತ್ತ ಮುನ್ನಡೆಯಬೇಕಿದೆ ಎಂದು ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಹೇಳಿದರು.
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ 80ನೇ ಜಯಂತ್ಯುತ್ಸವ ಮತ್ತು 12ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಸಂತ ಭಕ್ತಸಂಗಮ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಬಾಲಗಂಗಾಧರನಾಥಶ್ರೀಗಳು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಸಹ ನಮ್ಮೆಲ್ಲರ ಹೃದಯದಲ್ಲಿ ಅವರು ಚೈತನ್ಯರೂಪಿಯಾಗಿ ನೆಲೆಸಿದ್ದಾರೆ ಎಂದರು.
ಅಂತರಂಗದಲ್ಲಿರುವ ಅಜ್ಞಾನವನ್ನು ಕಳೆದು ಜ್ಞಾನವನ್ನು ಪಡೆದುಕೊಳ್ಳಲು ಮತ್ತು ಹುಟ್ಟಿದ ಮನುಷ್ಯನಿಗೆ ಮುಕ್ತಿಯ ದಾರಿ ತೋರಿಸಲು ನಮಗೆ ಗುರುಗಳು ಬೇಕು. ಅಂತಹ ಗುರುವನ್ನು ಪಡೆದಿರುವ ನಾವು ಭಾಗ್ಯಶಾಲಿಗಳು. ಇಂದು ಶ್ರೀ ಆದಿಚುಂಚನಗಿರಿ ಮಠವು ಬೃಹತ್ತಾಗಿ ಬೆಳೆದಿದೆ ಎನ್ನುವುದು ಸತ್ಯ. ಅದಕ್ಕೆ ಕಾರಣರಾದವರು ಶ್ರೀ ಮಠದ ಸದ್ಭಕ್ತರು ಹಾಗೂ ಗುರುಗಳ ಆಶೀರ್ವಾದದ ಶ್ರೀರಕ್ಷೆ ಕಾರಣವೇ ಹೊರತು ಬೇರೇನೂ ಅಲ್ಲ ಎಂದು ಹೇಳಿದರು.