ಬಿಜೆಪಿ ಕಾರ್ಯಾಲಯದಲ್ಲಿ ಕನಕದಾಸರ ಜಯಂತ್ಯುತ್ಸವ, ಕನಕರ ಕೊಡುಗೆಗಳನ್ನು ಸ್ಮರಿಸಿದ ಭಾನುಪ್ರಕಾಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು:
ಪ್ರಸಿದ್ಧ ಕೀರ್ತನೆಕಾರ, ಭಕ್ತಿ ಪಂಥದ ಹರಿಕಾರ ಕನಕದಾಸ ಅವರು ದಾಸ ಪರಂಪರೆಯಲ್ಲಿ ಶ್ರೇಷ್ಠರಾದವರು. ತಮ್ಮೆಲ್ಲಾ ನೋವು- ನಲಿವನ್ನು ಒಂದೇ ರೀತಿಯಲ್ಲಿ ಸ್ವೀಕರಿಸಿ ತಮ್ಮ ಧ್ಯೇಯೋದ್ದೇಶದ ಈಡೇರಿಕೆಗಾಗಿ ಶ್ರಮಿಸುವವರು ಭವಿಷ್ಯದಲ್ಲಿ ಸಮಾಜದಿಂದ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದಕ್ಕೆ ಕನಕದಾಸರು ಉದಾಹರಣೆ ಎಂದು ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಅವರು ಅಭಿಪ್ರಾಯಪಟ್ಟರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಏರ್ಪಡಿಸಲಾಗಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಕನಕದಾಸರು ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಸೇನಾಧಿಪತಿಯಾಗಿದ್ದು, ಯುದ್ಧದಲ್ಲಿ ಬಹಳ ನೋವುಂಡಾಗ ಚನ್ನಕೇಶವನಿಂದಾಗಿ ಉಳಿದುದಾಗಿ ನಂಬಿದರು. ಭಕ್ತಿಪಂಥದಲ್ಲಿ ಒಲವು ತೋರಿ ವ್ಯಾಸರಾಯರ ಶಿಷ್ಯರಾದರು ಎಂದು ವಿವರಿಸಿದರು.
ಅನೇಕ ರೀತಿಯ ಪರೀಕ್ಷೆಗಳನ್ನು ಅವರು ಎದುರಿಸಬೇಕಾಯಿತು. ಕನಕನ ಕಿಂಡಿ ವಾಸ್ತುಶಿಲ್ಪಿಗಳು ಮಾಡಿದ ಕಿಂಡಿಯಲ್ಲ. ಪೂಜೆ ನಡೆಯುವಾಗ ಕನಕನಿಗೆ ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಕನಕದಾಸರು ದುಃಖಿತರಾಗಿ ಹಿಂದೆ ಬಂದು ನಿಂತಿದ್ದರು. ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’ ಹಾಡನ್ನು ಹಾಡಿದರು. ಆಗ ದೇವರು ತಿರುಗಿ ನಿಂತನೆಂಬ, ಕಿಂಡಿ ಸೃಷ್ಟಿಯಾಯಿತೆಂಬ ಪ್ರತೀತಿ ಇದೆ ಎಂದು ತಿಳಿಸಿದರು.
ಅವರು ಹೇಳಿದ ಹಾಡುಗಳು ತತ್ವಪದಗಳು. ಅಂಥ ಶ್ರೇಷ್ಠರನ್ನು ಸ್ಮರಿಸುವ ಅವಕಾಶ ನಮಗೆಲ್ಲರಿಗೂ ಲಭಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಕಷ್ಟ ಬಂದರೂ, ಅಪಮಾನಗಳು ಬಂದರೂ ಜೀವನದಲ್ಲಿ ಧ್ಯೇಯ- ಸತ್ಯ ಮಾರ್ಗವನ್ನು ಬಿಡಬಾರದು ಎಂಬ ಸಂದೇಶ ಕನಕದಾಸರದು ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಗಣ್ಯರು ಈ ಸಂದರ್ಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರ ಕೊಡುಗೆಗಳನ್ನು ಸ್ಮರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!