ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಆಸ್ತಿ ಒಡೆಯ

ಹೊಸದಿಗಂತ ವರದಿ, ಹಾವೇರಿ:

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಭರತ್ ಬೊಮ್ಮಾಯಿ ಗುರುವಾರ ನಾಮಪತ್ರ ಸಲ್ಲಿಸಿದರು. ಪತ್ನಿ ಇಬ್ಬನಿ ಜೊತೆಗೆ ಹಲವು ಸ್ಥಳೀಯ ನಾಯಕರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ಬಂದು ಎರಡು ಪ್ರತಿಗಳಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ಇನ್ನು ನಾಮಪತ್ರದ ಜೊತೆಗೆ ಅಫಿಡವಿಟ್ ಸಲ್ಲಿಸಿರುವ ಅವರು ಕೋಟಿವೀರರಾಗಿದ್ದಾರೆ. ರೂ.೧೬.೧೭ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ತಂದೆ ಬಸವರಾಜ ಬೊಮ್ಮಾಯಿ ಅವರಿಂದ ರೂ.೫.೭೪ಲಕ್ಷ ಸಾಲವನ್ನೂ ಪಡೆದಿದ್ದಾಗಿ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಅಫಿಡವಿಟ್‌ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಘೋಷಿಸಿಕೊಂಡಿದ್ದು, ರೂ.೨.೦೩ಲಕ್ಷ ನಗದು, ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ೪.೦೫ಲಕ್ಷ ನಿಶ್ಚಿತ ಠೇವಣಿ, ಎಸ್.ಬಿ. ಖಾತೆಗಳಲ್ಲಿ ರೂ.೧.೧೯ಕೋಟಿ ನಗದು ಹೊಂದಿದ್ದಾರೆ. ಸಾರ್ವಜನಿಕ ಕಂಪನಿಗಳಲ್ಲಿ ರೂ.೧.೭೪ಲಕ್ಷ, ಖಾಸಗಿ ಕಂಪನಿಗಳಲ್ಲಿ ೫೦ಸಾವಿರ, ಪಾಲುದಾರಿಕೆಯಲ್ಲಿ ರೂ.೧.೨೩ಕೋಟಿ ಬಂಡವಾಳ ತೊಡಗಿಸಿದ್ದಾರೆ. ಗೋಲ್ಡ್ ಚಿಟ್ ಫಂಡ್‌ನಲ್ಲಿ ೭೦ಸಾವಿರ, ಮ್ಯೂಚುವಲ್ ಫಂಡ್‌ನಲ್ಲಿ ರೂ.೧೦.೨೦ಲಕ್ಷ, ರೂ.೮೧.೬೧ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಅವರ ಬಳಿ ಯಾವುದೇ ವಾಹನವಿಲ್ಲ. ಇನ್ನಿತರ ಆದಾಯ, ಬಡ್ಡಿ ಸೇರಿದಂತೆ ಒಟ್ಟು ೩.೭೯ ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಇನ್ನು ಬೆಂಗಳೂರಿನ ಆರ್.ಟಿ. ನಗರದಲ್ಲಿ ಒಂದು ವಾಸದ ಮನೆ, ಬೆಂಗಳೂರಿನ ಸೆಂಚುರಿ ಎಥೋಸ್ ಅಪಾರ್ಟ್ಮೆಂಟ್‌ನಲ್ಲಿ ಪ್ಲಾಟ್ ಸೇರಿದಂತೆ ರೂ.೫.೫೦ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಪತ್ನಿ ಇಬ್ಬನಿ ಬಳಿ ರೂ.೧.೪೩ಲಕ್ಷ ನಗದು ಹಣ, ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ ರೂ.೫೬.೩೨ಲಕ್ಷ, ವಿವಿಧ ಕಂಪನಿಗಳಲ್ಲಿ ರೂ.೩೩.೭೫ ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು, ಪಾಲುದಾರಿಕೆ ವ್ಯವಹಾರದಲ್ಲಿ ರೂ.೩೧.೧೨ಲಕ್ಷ ತೊಡಗಿಸಿದ್ದಾರೆ. ಇವರ ಬಳಿ ಮಾರುತಿ ಸ್ವಿಫ್ಟ್ ಕಾರು ಇದ್ದು, ರೂ.೧.೭೩ಕೋಟಿ ರೂ., ಮೌಲ್ಯದ ೨೭೦೨ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು ರೂ.೩.೬೪ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್, ಕೆಂಗೇರಿಯಲ್ಲಿ ಕೆಎಚ್‌ಬಿ ನಿವೇಶನ ಹಾಗೂ ಸೆಂಚುರಿ ಎಥೋಸ್ ಅಪಾರ್ಟ್ಮೆಂಟ್‌ನಲ್ಲಿ ಪ್ಲಾಟ್ ಸೇರಿದಂತೆ ರೂ.೨.೮೩ ಕೋಟಿ ರೂ., ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪುತ್ರನ ಬಳಿ ರೂ.೪೦.೪೭ ಲಕ್ಷ ಮೌಲ್ಯದ ಚರಾಸ್ತಿಯಿದೆ. ಒಟ್ಟು ಭರತ್ ಬೊಮ್ಮಾಯಿ ಅವರು ರೂ೧೬.೧೭ ಕೋಟಿ ರೂ., ಮೌಲ್ಯದ ಆಸ್ತಿ ಹೊಂದಿದ್ದಾರೆ. ಭರತ್ ಅವರ ಪತ್ನಿ ಇಬ್ಬನಿ ಅವರ ಹೆಸರಿನಲ್ಲಿ ಗೃಹ ಸಾಲ, ವಾಹನ ಸಾಲ ಸೇರಿದಂತೆ ೧ಕೋಟಿ ರೂ., ಸಾಲವಿದೆ.

ವಿದೇಶದಲ್ಲಿ ಶಿಕ್ಷಣ: ಭರತ್ ಬೊಮ್ಮಾಯಿ ಅವರು ಅಮೇರಿಕದ ಫರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಸಿಂಗಾಪುರದ ಮ್ಯಾನೇಜ್‌ಮೆಂಟ್ ವಿವಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಇನ್ನೋವೇಶನ್ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

‘ಲಕ್ಕಿ’ ವಾಹನದಲ್ಲಿ ಆಗಮಿಸಿದ ಭರತ್
ಕೆಎ೨೫ ಎಂಸಿ೨೬೯೧ ಸಂಖ್ಯೆಯ ಮಹೀಂದ್ರಾ ಬಿಳಿ ಸ್ಕಾರ್ಪಿಯೋ ಕಾರಿನಲ್ಲಿ ಆಗಮಿಸಿದ ಭರತ ಬೊಮ್ಮಾಯಿ ಹಸಿರು ವಸ್ತ್ರದಲ್ಲಿ ಮಿಂಚಿದರು. ಇನ್ನು ಈ ವಾಹನವನ್ನು ಬೊಮ್ಮಾಯಿ ಕುಟುಂಬ ಪ್ರತಿ ನಾಮಪತ್ರ ಸಲ್ಲಿಕೆ ವೇಳೆ ಕಡ್ಡಾಯವಾಗಿ ಬಳಸುತ್ತಾರೆ. ಇದು ಅವರ ‘ಲಕ್ಕಿ’ ವಾಹನ ಎಂದೇ ಗುರುತಿಸಿಕೊಂಡಿದೆ. ಅದರಂತೆ ಗುರುವಾರ ಕೂಡ ಭರತ್ ಇದೇ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!