ಭಾರತ್ ಮಾತಾ ಕಿ ಜೈ ಎಂಬುದು ಏಕತೆಯ ಮಹಾಮಂತ್ರ: ಅಮರೀಶ್ ಸಿಂಗ್

ಹೊಸದಿಗಂತ ವರದಿ, ಚಿತ್ರದುರ್ಗ

’ಭಾರತ್ ಮಾತಾ ಕಿ ಜೈ’ ಎಂಬುದು ಕೇವಲ ಘೋಷಣೆಯಲ್ಲ ದೇಶದ ಏಕತೆಯ ಮಹಾಮಂತ್ರ ಎಂದು ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಅಮರೀಶ್ ಸಿಂಗ್ ಹೇಳಿದರು.
ವಿಶ್ವ ಹಿಂದೂ ಪರಿಷತ್ – ಬಜರಂಗದಳ ವತಿಯಿಂದ ಏರ್ಪಡಿಸಿದ್ದ ಹಿಂದೂ ಮಹಾ ಗಣಪತಿ ಉತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಶೋಭಾಯಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿನ ಹಿಂದೂ ಧರ್ಮ ಸನಾತನ ಧರ್ಮ. ಇಡೀ ಜಗತ್ತು ಒಂದು ಕುಟುಂಬದಂತೆ ಎಂದು ಭಾವಿಸಿರುವ ಶ್ರೇಷ್ಠ ಧರ್ಮ. ಇಲ್ಲಿನ ಹಿಂದೂ ಜನರು ಇಡೀ ಜಗತ್ತಿಗೆ ಲೇಸಾಗಲಿ ಎಂದು ಬಯಸುವ ಹೃದಯ ವೈಶಾಲ್ಯತೆ ಉಳ್ಳವರು ಎಂದರು.
ಕೆಲವರು ದೇಶವನ್ನು ಭೂಮಿ ಎನ್ನುತ್ತಾರೆ. ಆದರೆ ಹಿಂದೂಗಳಾದ ನಾವು ನಮ್ಮ ದೇಶವನ್ನು ತಾಯಿ ಎಂದು ಭಾವಿಸಿದ್ದೇವೆ. ಹಾಗಾಗಿ ಹಿಂದೂಗಳ ಕಣಕಣದಲ್ಲೂ ದೇಶಭಕ್ತಿ ಉಕ್ಕಿ ಹರಿಯುತ್ತಿದೆ. ಇಲ್ಲಿನ ಜನರು ಯಾವುದೇ ಜಾತಿ, ಭಾಷೆ ಇರಲಿ. ಎಲ್ಲರೂ ಹಿಂದೂ, ನಾವೆಲ್ಲ ಒಂದು ಎಂಬ ವಿಶಾಲ ಮನೋಭಾವ ಹೊಂದಿದ್ದೇವೆ. ಹಾಗಾಗಿ ನಾವು ಎದೆತಟ್ಟಿಕೊಂಡು ಗರ್ವದಿಂದ ನಾನು ಹಿಂದೂ ಎಂದು ಹೇಳಬೇಕು ಎಂದು ಹೇಳಿದರು.
ಭಾರತಾಂಬೆಯ ಮಕ್ಕಳಾದ ನಾವು ಸದಾ ಆ ತಾಯಿಗೆ ಋಣಿಯಾಗಿರಬೇಕು. ತಾಯಿಯ ಸೇವೆಯಲ್ಲಿ ತೊಡಗಬೇಕು. ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ಹಿಂದೂ ಆಚಾರ ವಿಚಾರಗಳನ್ನು ಅನುಸರಿವ ಮೂಲಕ ನಮ್ಮ ಸಂಸ್ಕೃತಿತನ್ನು, ದೇಶದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯಬೇಕು. ಸಮಯ ಬಂದಾಗ ತಾಯಿಯ ಋಣ ತೀರಿಸುವ ನಿಟ್ಟಿನಲ್ಲಿ ಎಂತಹ ತ್ಯಾಗಕ್ಕೂ ಸಿದ್ಧರಾಗಬೇಕು ಕರೆ ನೀಡಿದರು.
ಸದ್ಗುರು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಂಜಾರ ಗುರುಪೀಠದ ಸರ್ದಾರ್ ಸೇವಾಲಾ ಸ್ವಾಮೀಜಿ, ಕೇತೇಶ್ವರ ಮಠದ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಸದಸ್ಯ ರಘು ಆಚಾರ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಕೂಡಾ ಅಧ್ಯಕ್ಷ ಜಿ.ಟಿ.ಸುರೇಶ್, ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ವಿಫುಲ್ ಜೈನ್, ಕಾರ್ಯದರ್ಶಿ ಶರಣ್‌ಕುಮಾರ್, ಬದ್ರಿನಾಥ್, ಪ್ರಭಂಜನ್, ಪಿ.ರುದ್ರೇಶ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಅಮರೀಶ್ ಸಿಂಗ್ ಗಣಪತಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರು ಸಹ ಇದಕ್ಕೆ ಜೈ ಜೋಡಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತಗಣ ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!