Tuesday, October 3, 2023

Latest Posts

ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಬರುತ್ತಿದೆ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇಂದ್ರ ಸರ್ಕಾರವು ದೇಶದಲ್ಲಿ ಅಪಘಾತಗಳಲ್ಲಿ ಪ್ರಾಣಹಾನಿ ತಗ್ಗಿಸುವ ನಿಟ್ಟಿನಲ್ಲಿ ವಾಹನಗಳಲ್ಲಿನ ಸುರಕ್ಷಾ ಮಾನದಂಡಗಳನ್ನು ಉನ್ನತೀಕರಿಸುತ್ತಿದ್ದು, ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಕಡ್ಡಾಯವಾಗಿ ಜಾರಿ ತಂದಿದೆ.

ಇದಕ್ಕಾಗಿ ಸುರಕ್ಷಾ ಸೌಲಭ್ಯಗಳ ಕಾರ್ಯಕ್ಷಮತೆ ಪರೀಕ್ಷಿಸಲು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ(Bharat New Car Assessment Program)ಪರಿಚಯಿಸಿದ್ದು, ಇದು ಹೊಸ ಕಾರುಗಳಲ್ಲಿನ ಸುರಕ್ಷತೆ ಗುಣಮಟ್ಟಕ್ಕೆ ರೇಟಿಂಗ್ಸ್ ನೀಡಲಿದೆ.

ಇದೀಗ ಕೇಂದ್ರ ಸಾರಿಗೆ ಇಲಾಖೆಯು ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗಾಗಿ ಪ್ರತ್ಯೇಕ ಸುರಕ್ಷಾ ಮಾನದಂಡ ಹೊಂದಿರುವ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಜಾರಿ ಮಾಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತ್ ಎನ್‌ಸಿಎಪಿಗೆ ಚಾಲನೆ ನೀಡಿದ್ದು, ಇದು ಅಕ್ಟೋಬರ್‌ 1 ರಿಂದ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿದೆ ಎಂದಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ಗ್ಲೋಬಲ್‌ ಎನ್‌ಸಿಎಪಿ ಮಾದರಿಯಲ್ಲಿಯೇ ಭಾರತ್‌ ಎನ್‌ಸಿಎಪಿಯ ಕ್ರ್ಯಾಶ್ ಟೆಸ್ಟ್‌ ಸಹ ವಯಸ್ಕ ಪ್ರಯಾಣಿಕರು ಮತ್ತು ಮಕ್ಕಳ ಸುರಕ್ಷತಾ ವಿಭಾಗದ ಕಾರ್ಯಕ್ಷಮತೆ ಆಧರಿಸಿ ಸುರಕ್ಷತಾ ರೇಟಿಂಗ್ ನೀಡಲಿದೆ. ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆ ಆಧರಿಸಿ ಸ್ಟಾರ್ ರೇಟಿಂಗ್‌ ನಿರ್ಧಾರವಾಗಲಿದ್ದು, ಸುರಕ್ಷಾ ಫೀಚರ್ಸ್ ಮತ್ತು ಕಾರ್ಯಕ್ಷಮತೆ ಮೇಲೆ ಸೊನ್ನೆಯಿಂದ ಐದರ ತನಕ ಸೇಫ್ಟಿ ರೇಟಿಂಗ್ ನೀಡಲಾಗುತ್ತದೆ. ಸುರಕ್ಷಿತ ಕಾರು ಎಂದು ಗುರುತಿಸಿಕೊಳ್ಳಲು ಕನಿಷ್ಠ ಮೂರು ಸ್ಟಾರ್ ರೇಟಿಂಗ್ಸ್ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಮೂರಕ್ಕಿಂತ ಕಡಿಮೆ ರೇಟಿಂಗ್ಸ್ ಪಡೆದುಕೊಳ್ಳುವ ಕಾರುಗಳನ್ನು ಕಳಪೆ ಎಂದು ಘೋಷಣೆ ಮಾಡಲಾಗುತ್ತದೆ.

ಕ್ರ್ಯಾಶ್ ಟೆಸ್ಟಿಂಗ್ ಪ್ರಮುಖ ಉದ್ದೇಶ, ಹೊಸ ಕಾರುಗಳು ಅಪಘಾತದಲ್ಲಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವ ರೀತಿ ಸುರಕ್ಷತೆಯನ್ನು ಖಾತ್ರಿಪಡಿಸುತ್ತೆ ಎನ್ನುವುದಾಗಿದ್ದು, ಇದು ಫ್ರಂಟ್ ಇಂಪ್ಯಾಕ್ಟ್ ಟೆಸ್ಟ್ , ಸೈಡ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಟೆಸ್ಟ್‌ ಒಳಗೊಂಡಿರುತ್ತದೆ.

ಕೇಂದ್ರ ಸರ್ಕಾರದ ಭಾರತ್‌ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ ಅನ್ನು ಈಗಾಗಲೇ ಹಲವಾರು ಕಾರು ಉತ್ಪಾದನಾ ಕಂಪನಿಗಳು ಸ್ವಾಗತಿಸಿವೆ. ಭಾರತ್‌ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ ಪ್ರೋಟೋಕಾಲ್ ಅಂತಾರಾಷ್ಟ್ರೀಯ ಎನ್‌ಸಿಎಪಿ ರೇಟಿಂಗ್ ಏಜೆನ್ಸಿಗಳಿಗೆ ಅನುಗುಣವಾಗಿರಲಿದ್ದು, ಪರೀಕ್ಷಾ ವೇಗವನ್ನು ಪ್ರತಿ ಗಂಟೆಗೆ ಗರಿಷ್ಠ 64 ಕಿಮೀ ಗಳಿಗೆ ನಿಗದಿಪಡಿಸಲಾಗಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಸೀಟ್ ಬೆಲ್ಟ್ ರಿಮೈಂಡರ್‌ ಮತ್ತು ಪಾದಚಾರಿ ರಕ್ಷಣೆಯ ಫೀಚರ್ಸ್ ಗಳು ಹೊಸ ಕಾರುಗಳಿಗೆ ಹೆಚ್ಚಿನ ಸ್ಕೋರ್ ನೀಡಲಿವೆ. ಸದ್ಯಕ್ಕೆ ಹೊಸ ಸುರಕ್ಷಾ ಅಭಿಯಾನದಡಿ ಸಾಮಾನ್ಯ ಕಾರುಗಳಿಗೆ ಮಾತ್ರ ರೇಟಿಂಗ್ಸ್ ನೀಡಲಾಗುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಇವಿ ಕಾರುಗಳಿಗೂ ಹೊಸ ಸುರಕ್ಷಾ ಮಾನದಂಡ ಪರಿಚಯಿಸುವ ಸಿದ್ದತೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!