ಹೊಸದಿಗಂತ ಡಿಜಿಟಲ್ ಡೆಸ್ಕ್
ಅಶ್ಗಾಬಾತ್ (ತುರ್ಕಮೆನಿಸ್ತಾನ್): ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಸುಧಾರಿಸಲು ಇರಾನ್ನಲ್ಲಿ ಭಾರತ ನಿರ್ಮಿಸಿರುವ ಚಬಹಾರ್ ಬಂದರ್ ಅನ್ನು ಬಳಸಿಕೊಳ್ಳಬಹುದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಶನಿವಾರ ಅಶ್ಗಾಬಾತ್ನ ಒಗುಝರ್ ಅರಮನೆಯಲ್ಲಿ ತುರ್ಕಮೆನಿಸ್ತಾನದ ಗುರ್ಬಂಗುಲಿ ಬರ್ಡಿಮುಹಮೆಡೋವ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಇರಾನ್ನಲ್ಲಿ ಭಾರತ ನಿರ್ಮಿಸಿರುವ ಚಬಹಾರ್ ಬಂದರ್ ಅನ್ನು ಭಾರತ ಮತ್ತು ಮಧ್ಯ ಏಷ್ಯಾ ನಡುವಿನ ವ್ಯಾಪಾರವನ್ನು ಸುಧಾರಿಸಲು ಬಳಸಬಹುದು ಎಂದರು.
ಈ ವೇಳೆ ಎರಡು ರಾಷ್ಟ್ರಗಳ ಮುಖ್ಯಸ್ಥರು ನಾಲ್ಕು ತಿಳುವಳಿಕೆ ಒಪ್ಪಂದ (ಎಂಒಯು)ಗಳಿಗೆ ಸಹಿ ಹಾಕಿದರು. ಇಂಟರ್ನ್ಯಾಷನಲ್ ನಾರ್ತ್-ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ (ಐಎನ್ಎಸ್ಟಿಸಿ) ಮತ್ತು ಇಂಟರ್ನ್ಯಾಷನಲ್ ಟ್ರಾನ್ಸ್ಪೋರ್ಟ್ ಆ್ಯಂಡ್ ಟ್ರಾನ್ಸಿಟ್ ಕಾರಿಡಾರ್ (ಐಟಿಟಿಸಿ) ಅಶ್ಗಾಬಾತ್ ಒಪ್ಪಂದದ ಮಹತ್ವವನ್ನು ರಾಷ್ಟ್ರಪತಿಗಳು ಎತ್ತಿ ತೋರಿಸಿದರು.
ಭಾರತದ ಹಣಕಾಸು ಗುಪ್ತಚರ ಘಟಕ ಮತ್ತು ತುರ್ಕಮೆನಿಸ್ತಾನದ ಹಣಕಾಸು ಮಾನಿಟರಿಂಗ್ ಸರ್ವೀಸ್ ನಡುವಿನ ತಿಳುವಳಿಕಾ ಒಪ್ಪಂದವು ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರದ ಚೌಕಟ್ಟನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಯಾವುದೇ ವ್ಯಾಪಾರ ವ್ಯವಸ್ಥೆಗೆ ಸಂಪರ್ಕವು ನಿರ್ಣಾಯಕವಾಗಿದೆ ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು.
ಡಿಜಿಟಲೀಕರಣದ ಕಡೆಗೆ ಅದರ ಚಾಲನೆಯಲ್ಲಿ ತುರ್ಕಮೆನಿಸ್ತಾನ್ ಜೊತೆ ಪಾಲುದಾರಿಕೆಗೆ ಭಾರತವು ಸಿದ್ಧವಾಗಿದೆ ಎಂದು ನಾನು ತಿಳಿಸಿದ್ದೇನೆ. ಬಾಹ್ಯಾಕಾಶವು ಪರಸ್ಪರ ಪ್ರಯೋಜನಕಾರಿ ಸಹಕಾರದ ಮತ್ತೊಂದು ಕ್ಷೇತ್ರವಾಗಿದೆ. ಉಭಯ ದೇಶಗಳು ಶತಮಾನಗಳಷ್ಟು ಹಳೆಯ ನಾಗರಿಕತೆ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ ಎಂದು ಅವರು ಹೇಳಿದರು.
ನಾಳೆ ಕೊನೆಗೊಳ್ಳುತ್ತದೆ ಭೇಟಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 3 ದಿನಗಳ ಅಧಿಕೃತ ಭೇಟಿಗಾಗಿ ಶುಕ್ರವಾರ ಮಧ್ಯಾಹ್ನ ತುರ್ಕಮೆನಿಸ್ತಾನದ ಅಶ್ಗಾಬಾತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರಿಗೆ ರಾಜಧಾನಿ ಅಶ್ಗಾಬಾತ್ನಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಏ. 3ರಂದು ಕೊನೆಗೊಳ್ಳುವ ಈ ಭೇಟಿಯ ನಂತರ, ರಾಷ್ಟ್ರಪತಿ ಕೋವಿಂದ್ ಅವರು ಏ. 4-7 ರವರೆಗೆ ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಲಿದ್ದಾರೆ.
ಸಹಿ ಮಾಡಿದ ನಾಲ್ಕು ತಿಳುವಳಿಕಾ ಒಪ್ಪಂದಗಳಿವು
- ತುರ್ಕಮೆನಿಸ್ತಾನದ ಹಣಕಾಸು ಮತ್ತು ಆರ್ಥಿಕ ಸಚಿವಾಲಯದ ಹಣಕಾಸು ಮೇಲ್ವಿಚಾರಣೆ ಸೇವೆ ಮತ್ತು ಭಾರತದ ಹಣಕಾಸು ಗುಪ್ತಚರ ಘಟಕದ ನಡುವಿನ ಒಪ್ಪಂದ.
- ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತುರ್ಕಮೆನಿಸ್ತಾನ್ ಸರಕಾರ ಮತ್ತು ಭಾರತ ಸರಕಾರಗಳ ನಡುವಿನ ಒಪ್ಪಂದ.
- 2022-2025ರ ಅವಧಿಗೆ ಸಂಸ್ಕೃತಿ ಮತ್ತು ಕಲೆಗಳ ಕ್ಷೇತ್ರಗಳಲ್ಲಿ ತುರ್ಕಮೆನಿಸ್ತಾನ್ ಸರಕಾರ ಮತ್ತು ಭಾರತ ಸರಕಾರದ ನಡುವಿನ ಸಹಕಾರದ ಕಾರ್ಯಕ್ರಮ.
- ಯುವ ವಿಷಯಗಳಲ್ಲಿ ಸಹಕಾರಕ್ಕಾಗಿ ತುರ್ಕಮೆನಿಸ್ತಾನದ ಕ್ರೀಡಾ ಮತ್ತು ಯುವ ನೀತಿ ಸಚಿವಾಲಯ ಮತ್ತು ಭಾರತ ಗಣರಾಜ್ಯದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ನಡುವಿನ ಒಪ್ಪಂದ.