ಹೊಸದಿಗಂತ ವರದಿ,ಭಟ್ಕಳ:
ವರ್ಷಗಳಿಂದ ವರ್ಷಕ್ಕೆ ಭಟ್ಕಳವು ಒಂದಾಲ್ಲೊಂದು ಪ್ರಕರಣ ಅಥವಾ ಘಟನೆಯಿಂದಾಗಿ ಇಂದಿಗು ಸಹ ದೇಶದಲ್ಲಿಯೇ ಸೂಕ್ಷ್ಮ ಪ್ರದೇಶ ಎನ್ನುವುದರಿಂದ ಹೊರ ಬರಲು ಸಾಧ್ಯವಾಗದೇ ಇರುವದರ ನಡುವೆ ಕೆಲ ವರ್ಷಗಳಿಂದ ನಗರ ಸೇರಿದಂತೆ ಕೆಲ ಗ್ರಾಮೀಣ ಭಾಗದಲ್ಲಿ ಅನಾಥವಾಗಿ ಯಾವುದೇ ಕಾರಣ ಇಲ್ಲದೇ ಕಾರುಗಳು ನಿಂತಿದ್ದು ಈ ಬಗ್ಗೆ ಯಾವುದೇ ಇಲಾಖೆಯು ಸಹ ಕ್ರಮಕ್ಕೆ ಮುಂದಾಗದೇ ಇರುವುದು ಎದ್ದು ಕಾಣಿಸುತ್ತಿದೆ.
ಭಟ್ಕಳದಲ್ಲಿ ಪೊಲೀಸ್ ಇಲಾಖೆಯ ನಿಗಾ ಎಷ್ಟೇ ಇದ್ದರು ಸಹ ಕಡಿಮೆ ಎಂಬುದಕ್ಕೆ ಭಟ್ಕಳದಲ್ಲಿನ ಈ ಒಂದು ಉದಾಹರಣೆಯೇ ಪ್ರಮುಖ ಸಾಕ್ಷಿ ಎನ್ನಬಹುದಾಗಿದೆ. ಅದರಂತೆ ಕಂದಾಯ ಇಲಾಖೆ ಇತರೇ ಎಲ್ಲ ಇಲಾಖೆಗಳಲ್ಲಿಯೂ ಕೂಡಾ ಭಟ್ಕಳದ ಕುರಿತು ವಿಶೇಷವಾದ ನಿಗಾ ಇದ್ದೇ ಇದೆ ಎನ್ನುವುದನ್ನು ಇಲಾಖೆಗಳ ಕಾರ್ಯ ವೈಖರಿಯೇ ತಿಳಿಸುತ್ತದೆ. ದೇಶದಲ್ಲಿಯೇ
ಸೂಕ್ಷ್ಮ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಭಟ್ಕಳದಲ್ಲಿ ಅನೇಕ ಕಡೆಗಳಲ್ಲಿ ಅನಾಥವಾಗಿ ನಿಂತಿರುವ ಕಾರುಗಳು, ಬೈಕುಗಳು ಹಲವಾರು ಸಂಶಯಕ್ಕೆ ಎಡೆಮಾಡಿಕೊಡುತ್ತಿವೆ. ಕಾರಣ ಸಾಕಷ್ಟು ವರ್ಷಗಳು ಕಳೆದಿದ್ದರು ರಸ್ತೆಯ ಅಕ್ಕ ಪಕ್ಕ ಸೇರಿದಂತೆ ಸಾರ್ವಜನಿಕ ಸ್ಥಳ ಹಾಗೂ ಜನ ದಟ್ಟಣೆಗಳಿರದ ಜಾಗದಲ್ಲಿ ನಿಂತಿರುವ ಗುಜರಿ ವಾಹನದಂತೆ ಕಾಣುವ ಕಾರು ಬೈಕಗಳ ಕುರಿತಾದ ಮಾಹಿತಿ ಭಟ್ಕಳದ ಭದ್ರತೆಯ ದ್ರಷ್ಟಿಯಿಂದ ಪೊಲೀಸ್ ಸೇರಿದಂತೆ ಕಂದಾಯ ಹಾಗೂ ಆರ್.ಟಿ.ಓ. ಕಚೇರಿಯಲ್ಲಿ ಇರಲೇಬೇಕಾಗಿದೆ.
ಕಳೆದ ಹಲವಾರು ತಿಂಗಳುಗಳಿಂದ ಇಲ್ಲಿನ ಅಂಚೆ ಕಚೇರಿ ರಸ್ತೆಯಲ್ಲಿ ಅನಾಥವಾಗಿ ನಿಂತುಕೊಂಡಿದ್ದ ಕಾರೊಂದು ಮುಖ್ಯ ರಸ್ತೆಗೆ ಬಂದು ನಿಂತಿವೆ. ಮುಖ್ಯ ರಸ್ತೆ ಆಗಲೇ ಕಿರಿದಾಗಿದ್ದು ವಾಹನಗಳ ಭರಾಟೆಯ ನಡುವೆ ಈ ಅನಾಥವಾಗಿ ಇರಿಸಿದ ಕಾರು ಬೈಕಗಳಿಂದ ಅಪಘಾತಕ್ಕೆ ದಾರಿ ಮಾಡಿಕೊಡುವುದರ ಜೊತೆಗೆ ಸ್ಥಳಾಂತರಗೊಂಡಿರುವುದು ಹೇಗೆ ಎಂಬ ಪ್ರಶ್ನೆ ಸಹ ಉದ್ಭವಿಸುತ್ತದೆ.
ಇನ್ನು ಪೊಲೀಸ್ ಠಾಣೆಯಿಂದ ಸ್ವಲ್ಪವೇ ದೂರದಲ್ಲಿರುವ ಈ ಕಾರನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡು ಭಟ್ಕಳಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದರೂ ಆಶ್ಚರ್ಯವಿಲ್ಲ ಎನ್ನುವ ಪರಿಸ್ಥಿತಿಯ ಭಯ ಜನರಲ್ಲಿ ಕಾಡುತ್ತಲಿದೆ.
ಅದರಂತೆ ಕಳೆದ ಕೆಲವು ಸಮಯದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಭಟ್ಕಳ ಅರ್ಬನ್ ಬ್ಯಾಂಕ್ ಕಟ್ಟಡದ ಅಪಾಯಕಾರಿ ತಿರುವಿನಲ್ಲಿ ಒಂದು ಕಾರನ್ನು ನಿಲ್ಲಿಸಲಾಗಿದ್ದು, ಸಂಪೂರ್ಣ ನುಜ್ಜುಗುಜ್ಜಾದ ಸ್ಥಿತಿಯಲ್ಲಿದೆ. ಸದ್ಯ ರಸ್ತೆ ಅಗಲೀಕರಣ ಕಾಮಗಾರಿ ಅಲ್ಲಲ್ಲಿ ಅರ್ದಂಬರ್ಧ ನಡೆಯುತ್ತಿದ್ದು,
ವಾಹನಗಳ ಓವರ್ ಟೇಕ್ ಮಾಡುವ ಭರಾಟೆಯಲ್ಲಿ ತಿರುವಿನಲ್ಲಿ ಸ್ವಲ್ಪ ಯಾಮಾರಿದರೂ ಕೂಡಾ ಕಾರಿಗೆ ಬಂದು ಡಿಕ್ಕಿಯಾಗುವ ಸಂಭವವೇ ಜಾಸ್ತಿ ಇವೆ.
ಇನ್ನು ರಾತ್ರಿ ಹೊತ್ತಿನಲ್ಲಿ ದ್ವಿಚಕ್ರ ವಾಹನ ಸವಾರರಿಗೂ ಇದು ಕಂಟಕ ಪ್ರಾಯವಾಗಿ ಏನಜ ಹೊರತಾಗಿಲ್ಲ. ಯಾರೂ ಕೂಡಾ ಈ ಬಗ್ಗೆ ಗಮನ ಹರಿಸಿದಂತೆಯೇ ಕಾಣುತ್ತಿಲ್ಲ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಮುಖ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳೆಲ್ಲವೂ ಸದ್ಯ ಈ ಅನಾಥವಾಗಿರುವ ಅನುಮಾನಾಸ್ಪದ ಕಾರು ಬೈಕಗಳಿಂದ
ಡಂಪಿಂಗ್ ಯಾರ್ಡ್ ಆದರೂ ಸಹ ಗಮನ ಹರಿಸದೇ ಇರುವ ಸಂಬಂಧ ಪಟ್ಟ ಅಧಿಕಾರಿಗಳ ನಡೆ ಮಾತ್ರ ವಿಚಿತ್ರ ಎನ್ನಿಸುತ್ತಿದೆ.
ಈ ಎಲ್ಲಾ ನಾಗರಿಕರ ಆತಂಕ ಹಾಗೂ ಪ್ರಶ್ನೆಗಳಿಗೆ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕಾದ ಅನಿವಾರ್ಯ ಸದ್ಯಕ್ಕಿದೆ.