ಹೊಸದಿಗಂತ ವರದಿ,ಮಂಗಳೂರು:
ದ್ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದೇವಸ್ಯ ಮೂಡೂರು ಎಂಬಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ನವರಾತ್ರಿ ಸಮಯದಲ್ಲಿ ವೇಷ ಧರಿಸಿ ‘ಭವತಿ ಭಿಕ್ಷಾಂದೇಹಿ’ ಎಂದು ನಿಧಿ ಸಂಗ್ರಹಿಸಲು ಮುಂದಾಗಿ ಈಗ ನಾಡಿನ ಎಲ್ಲರ ಗಮನ ಸೆಳೆದಿದ್ದಾರೆ.
ಶಾಲೆ ಮೂಲಭೂತ ಅವಶ್ಯಕತೆ ಪೂರೈಸಲು ಅಗತ್ಯ ಸಹಕಾರ ದೊರೆ ಯದೇ ಹೋದಾಗ, 70 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸ ಬೇಕು, ಬೆಳಗಿಸಬೇಕು ಎಂಬ ಧ್ಯೇಯ ತೊಟ್ಟ ಶಾಲಾಭಿವೃದ್ಧಿಯ ಸದಸ್ಯರು, ಹಳೇವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ಊರಿನ ವಿದ್ಯಾಭಿಮಾನಿಗಳು ಱಭವತಿ ಭಿಕ್ಷಾಂದೇಹಿ ವಿದ್ಯಾ ದೇಗುಲ ಸೇವಾ ಯೋಜನೆೞ ಯ ಹೆಸರಲ್ಲಿ ನಿಧಿ ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದು, ಅದಕ್ಕಾಗಿ ನವರಾತ್ರಿಯ ವೇಷ ಧರಿಸಿ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನಾದ್ಯಂತ ಸಂಚರಿಸಿ ನಿಧಿ ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದಾರೆ.
ಅದಕ್ಕಾಗಿ ಶಾಲಾ ಎಸ್‌ಡಿಎಂಸಿಯ ಅಧ್ಯಕ್ಷ ವಸಂತ ಮುದಿಮಾರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶವಂತ ಕೆ., ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಹರೀಶ್ ಅವರುಗಳು ಸ್ವತಃ ವೇಷ ಧರಿಸಿ ಸಂಚಾರ ಕೈಗೊಂಡಿದ್ದಾರೆ. ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ನವರಾತ್ರಿಯ ಸಂಧರ್ಭವನ್ನು ಬಳಸಿಕೊಂಡ ಅವರುಗಳ ನಡೆ ಸರ್ವತ್ರ ಶ್ಲಾಘನೆಗೆ ಒಳಗಾಗಿದೆ.
ಗುರುವಾರ ಚಾಲನೆ ಪಡೆದ ಈ ನಿಧಿ ಸಂಗ್ರಹ ಅಭಿಯಾನದ ವೇಷಧಾರಿ ಸಂಚಾರದ ಚಾಲನಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಪ್ರಮೀಳಾ, ಪ್ರಮುಖರಾದ ಸೀತಾರಾಮ್ ಮತ್ತಿತರರು ಉಪಸ್ಥಿತರಿದ್ದರು.