ಒಂದೇ ಕುಟುಂಬದ ನಾಲ್ವರು ಭೂ ಸಮಾಧಿ: ಮಮ್ಮಲ ಮರುಗಿದ ಜನ

ಹೊಸದಿಗಂತ ಅಂಕೋಲಾ:

ಶಿರೂರು ಬಳಿ ಗುಡ್ಡ ಕುಸಿತದಿಂದಾಗಿ ಭಾರೀ ಪ್ರಮಾಣದಲ್ಲಿ ಸಂಭವಿಸಿರುವ ದುರಂತದಲ್ಲಿ ಒಂದೇ ಕುಟುಂಬದ ಐದು ಜನರು ದಾರುಣ ಸಾವು ಕಂಡಿರುವುದು ಸಾರ್ವಜನಿಕರಲ್ಲಿ ಕಣ್ಣೀರು ತರಿಸಿದೆ.

ಗುಡ್ಡ ಕುಸಿದ ಸ್ಥಳದಲ್ಲಿ ಇದ್ದ ಮೂರು ಅಂಗಡಿಗಳು ಮತ್ತು ಒಂದು ಮನೆ ಮಣ್ಣಿನ ಅಡಿ ಸಿಲುಕಿವೆ. ಈ ಗುಡ್ಡದ ಬುಡದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಅಂಗಡಿ ಮಾಲಿಕ ಲಕ್ಷ್ಮಣ ನಾಯ್ಕ(47) ಪುಟ್ಟ ಚಹದಂಗಡಿ ನಡೆಸುತ್ತಿದ್ದರು. ಪತ್ನಿ ಮತ್ತು ಇನ್ನೂ ಜಗ ನೋಡದ ಇಬ್ಬರು ಮಕ್ಕಳೊಂದಿಗೆ ಸಂಸಾರ ಸಾಗಿಸಿದ್ದರು.

ಆದರೆ ಧಾರಾಕಾರ ಮಳೆಗೆ ಮಂಗಳವಾರ ಬೆಳಿಗ್ಗೆ 7.30 ಸುಮಾರಿಗೆ ಧರೆ ಕುಸಿದು ಬಿದ್ದು ಇಡೀ ಕುಟುಂಬವನ್ನು ಬಲಿ ಪಡೆಯಿತು.ಜೊತೆಗೆ ಮನೆಗೆ ಬಂದಿದ್ದ ಸಂಬಂಧಿ ಸಹ ಸಾವು ಕಾಣಬೇಕಾಯಿತು. ಮಂಗಳವಾರ ಸಂಜೆಲಕ್ಷ್ಮಣ ನಾಯ್ಕ(47) ಅವರ ಪತ್ನಿ ಶಾಂತಿ(36)ಮಗ ರೋಶನ (11) ಇವರ ಶವ ಸಂಜೆ ಗೋಕರ್ಣ ವ್ಯಾಪ್ತಿಯ ದುಬ್ಬನಸಶಿ ತೀರದಲ್ಲಿ ಪತ್ತೆಯಾಗಿದೆ. ಜೊತೆಗೆ ಅಪರಿಚಿತ ಇನ್ನೊಂದು ಪುರುಷ ಶವ ಸಿಕ್ಕಿದೆ.
ಆದರೆ ಮಗಳು ಆವಂತಿಕಾ(6) ಮತ್ತು ಅವರ ಮನೆಗೆ ಹಿಂದಿನ ದಿನ ಬಂದು ಉಳಿದುಕೊಂಡಿದ್ದ ಅವರ ಸಂಬಂಧಿ
ಜಗನ್ನಾಥ (55) ಎನ್ನುವವರ ಮಾಹಿತಿ ಸಿಕ್ಕಿಲ್ಲ.

ಬುಧವಾರ ಬೆಳಿಗ್ಗೆ ಎನ್.ಡಿ.ಆರ್.ಎಫ್, ನೇವಿ ಹಾಗೂ ಅಗ್ನಿಶಾಮಕ ತಂಡಗಳು ಜಂಟಿಯಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಐಆರ್ ಬಿ ಜೊತೆಗೂಡಿ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಮಂಗಳವಾರ ರಾತ್ರಿ ಸ್ಥಳೀಯ ಶಾಸಕ ಸತೀಶ ಸೈಲ್ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಮಂತ್ರಿ ಮಂಕಾಳ ವೈದ್ಯ, ಈ ದುರಂತಕ್ಕೆ ಅವೈಜ್ಞಾನಿಕ ಹೆದ್ದಾರಿ ಅಗಲೀಕರಣ‌ ಕಾರಣವಾಗಿದ್ದು, ಕಾಮಗಾರಿ ನಡೆಸಿದ ಕಂಪನಿ ಐ ಆರ್ ಬಿ ವಿರುದ್ಧ ದೂರು ದಾಖಲಿಸುವುದಾಗಿ ಗುಡುಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಅವೈಜ್ಞಾನಿಕ ಎಂದು ಈಗ ಜ್ಞಾನೋದಯ ಆಯಿತೇ. ಆಗ ಕತ್ತೆ ಕಾಯ್ತಿದ್ದರೋ.
    ಕೆಟ್ಟ ಮೇಲೆ ಬುದ್ಧಿ ! ಅಟ್ಟ ಮೇಲೆ …….! ಸುಟ್ಟ ಮೇಲೆ …….!

LEAVE A REPLY

Please enter your comment!
Please enter your name here

error: Content is protected !!