ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಶ್ರದ್ಧಾವಾಕರ್, ಬೆಂಗಳೂರಿನ ಮಹಾಲಕ್ಷ್ಮಿ ಹತ್ಯೆ ಪ್ರಕರಣದಂತೆ ಮತ್ತೊಂದು ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದ್ದು, ಮದುವೆಯಾಗು ಎಂದು ಪೀಡಿಸಿದ ಲಿವ್ ಇನ್ ಸಂಗಾತಿಯನ್ನು ವಿವಾಹಿತ ಕೊಂದು ಬರೊಬ್ಬರಿ 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಮಧ್ಯ ಪ್ರದೇಶದ ದೇವಾಸ್ ನಗರದಲ್ಲಿ ಈ ಧಾರುಣ ಘಟನೆ ನಡೆದಿದ್ದು, ವಿವಾಹಿತನೊಬ್ಬ ಲಿವ್ಇನ್ ರಿಲೇಶನ್ ಶಿಪ್ನಲ್ಲಿದ್ದ ಸ್ನೇಹಿತೆಯನ್ನ ಕೊಂದು, ಮೃತದೇಹದ ಕೈಗಳನ್ನು ಕುತ್ತಿಗೆಗೆ ಬಲವಾಗಿ ಕಟ್ಟಿ ಫ್ರಿಡ್ಜ್ನಲ್ಲಿಟ್ಟಿದ್ದ ಕೃತ್ಯ ಬೆಳಕಿಗೆ ಬಂದಿದೆ.
ಬರೋಬ್ಬರಿ 8 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿ ಸಂಜಯ್ ಪಾಟಿದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಉಜ್ಜಯಿನಿ ನಿವಾಸಿಯಾಗಿರುವ ಆರೋಪಿ ಸಂಜಯ್ ಪಾಟಿದಾರ್ ಕಳೆದ ಐದು ವರ್ಷಗಳಿಂದ ಪ್ರತಿಭಾ ಅಲಿಯಾಸ್ ಪಿಂಕಿ ಪ್ರಜಾಪತಿ ಎಂಬ ಮಹಿಳೆ ಜೊತೆ ಲಿವ್ಇನ್ ಸಂಬಂಧದಲ್ಲಿದ್ದ. ಕಳೆದ ಕೆಲ ವರ್ಷಗಳಿಂದ ಆಕೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಆದರೆ ಅದಾಗಲೇ ಮದುವೆಯಾಗಿದ್ದ ಸಂಜಯ್ ಪಾಟಿದಾರ್, ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ.
ಆದರೆ ಪ್ರತಿಭಾ ಮಾತ್ರ ಆತನನ್ನು ಪೀಡಿಸುವುದನ್ನು ಬಿಟ್ಟಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಸಾಕಷ್ಟು ಜಗಳ ಕೂಡ ನಡೆದಿತ್ತು. ಇದರಿಂದ ರೋಸಿ ಹೋಗಿದ್ದ ಸಂಜಯ್ ಪಾಟಿದಾರ್ 8 ತಿಂಗಳ ಹಿಂದೆ ತನ್ನ ಸ್ನೇಹಿತ ವಿನೋದ್ದವೆ ಎಂಬಾತನನ್ನು ಕರೆಸಿಕೊಂಡು ಪ್ರತಿಭಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನ ಫ್ರಿಡ್ಜ್ನಲ್ಲಿಟ್ಟು ಹೊರಟು ಹೋಗಿದ್ದ.
ಬಳಿಕ ಆರೋಪಿ ಸಂಜಯ್ ಸ್ಥಳೀಯರಾದ ಶ್ರೀವಾಸ್ತವ ಎಂಬವರಿಂದ ಆ ಮನೆಯನ್ನು ಬಾಡಿಗೆ ಪಡೆದಿದ್ದ . ಕೊಲೆ ಮಾಡಿದ ಬಳಿಕವೂ ಸಂಜಯ್ ಆ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಕೆಲವು ವಸ್ತುಗಳನ್ನು ಅಧ್ಯಯನ ಕೊಠಡಿ ಮತ್ತು ಮಾಸ್ಟರ್ ಬೆಡ್‌ರೂಮ್‌ನಲ್ಲಿ ಇರಿಸುವುದನ್ನು ಮುಂದುವರೆಸಿದ್ದ. ಹೀಗಾಗಿ ಮನೆ ಮಾಲೀಕರಿಗೂ ಹೆಚ್ಚಿನ ವಿಚಾರ ಗೊತ್ತಿರಲಿಲ್ಲ. ಆದರೆ ಇತ್ತೀಚೆಗೆ ಆ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಿತ್ತು. ಹೀಗಾಗಿ ಪ್ರತಿಭಾ ಮೃತದೇಹವನ್ನು ಇರಿಸಿದ್ದ ಫ್ರಿಡ್ಜ್ ಗೆ ವಿದ್ಯುತ್ ಸರಬರಾಜು ಇಲ್ಲದೆ ದೇಹ ಕೊಳೆತು ದುರ್ನಾತ ಬೀರತೊಡಗಿತ್ತು.
ಇದರಿಂದ ಅಕ್ಕಪಕ್ಕದ ನಿವಾಸಿಗಳು ಅನುಮಾನಗೊಂಡು ಮನೆಯ ಬಾಗಿಲು ತೆರೆಯುವಂತೆ ಮಾಲೀಕರನ್ನು ಕೇಳಿದ್ದಾರೆ. ಅದರಂತೆ ಬಾಗಿಲು ತೆರೆದಾಗ ಪಾಟಿದಾರ್ಗೆ ಸಂಬಂಧಿಸಿದ ವಸ್ತುಗಳು ಒಳಗಿದ್ದ ಕಾರಣ ಮತ್ತೆ ಲಾಕ್ ಮಾಡಿದ್ದರು. ಆದರೂ ದುರ್ನಾತ ಬರುತ್ತಿದ್ದರಿಂದ ಮತ್ತೆ ಬಾಗಿಲು ತೆಗೆದು ಫ್ರಿಡ್ಜ್ ತೆರೆದಾಗ ಸ್ಥಳೀಯರಿಗೆ ಆಘಾತ ಕಾದಿತ್ತು.
ದುರ್ವಾಸನೆ ಬರುತ್ತಿದ್ದ ಫ್ರಿಡ್ಜ್ ಬಾಗಿಲು ತೆಗೆಯುತ್ತಿದ್ದಂತೆಯೇ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. ಫ್ರಿಡ್ಜ್ ನಲ್ಲಿ ಸೀರೆಯುಟ್ಟುಕೊಂಡು, ಆಭರಣ ತೊಟ್ಟು, ಅಲಂಕರಿಸಿಕೊಂಡು, ಕುತ್ತಿಗೆ ಕೈಗಳನ್ನು ಬಿಗಿಯಾಗಿ ಕಟ್ಟಿರುವ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ.
ಯುವತಿಯನ್ನು 2024ರ ಜೂನ್ನಲ್ಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನೆರೆಹೊರೆಯವರ ಪ್ರಕಾರ ಪ್ರತಿಭಾಳನ್ನು ಮಾರ್ಚ್ 24ರ ನಂತರ ಯಾರೂ ನೋಡಿರಲಿಲ್ಲ. ನೆರೆಮನೆಯವರಿಗೆ ಸಂಜಯ್ ಅವಳು ಮನೆಗೆ ಹೋಗಿದ್ದಾಳೆ ಎಂದು ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.