ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಜ್ಯವನ್ನೆ ಬೆಚ್ಚಿ ಬಿಳಿಸಿದ್ದ ಬೀದರ್ ಎಟಿಎಂ ದರೋಡೆ ಪ್ರಕರಣ ಸಂಬಂಧ ಇಬ್ಬರು ದರೋಡೆಕೋರರ ಚಿತ್ರಗಳನ್ನು ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ರೂ. 5 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.
ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ವೈಶಾಲಿ ಜಿಲ್ಲೆಯ ಫತೇಪುರ್ ಫುಲ್ವಾರಿಯಾ ನಿವಾಸಿ ಅಮನ್ ಕುಮಾರ್ ಮತ್ತು ಬಿಹಾರದ ವೈಶಾಲಿ ಜಿಲ್ಲೆಯ ಜನದಾಹಾ ಬಳಿಯ ಮಹಿಸೂರ್ ನಿವಾಸಿ ಅಲೋಕ್ ಕುಮಾರ್ ಅಕಾ ಅಶುತೋಷ್ ಅಕಾ ಅಂಬಾನಿ ಅವರು ಬೇಕಾಗಿದ್ದಾರೆ ಎಂದು ಕರ್ನಾಟಕ ಪೊಲೀಸರು ತಿಳಿಸಿದ್ದಾರೆ.
ಅಮನ್ ಕುಮಾರ್ ಮತ್ತು ಅಲೋಕ್ ಕುಮಾರ್ ಬಂಧನಕ್ಕೆ ಸುಳಿವು ನೀಡುವ ಯಾವುದೇ ವ್ಯಕ್ತಿಗೆ ರೂ. 5 ಲಕ್ಷ ನಗದು ಬಹುಮಾನ ನೀಡಲಾಗುವುದು, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಡಿಐಜಿಪಿ ಕಲಬುರಗಿ (94808 00030), ಎಸ್ಪಿ ಬೀದರ್ (94808 03401) ಮತ್ತು ಡಿಎಸ್ಪಿ ಬೀದರ್ (94808 03420) ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ. ಬೀದರ್ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಖ್ಯ ಶಾಖೆಯ ಮುಂಭಾಗದಲ್ಲಿ ಜನವರಿ 16 ರಂದು ಹಗಲು ಹೊತ್ತಿನಲ್ಲಿ ಘಟನೆ ನಡೆದಿತ್ತು.
ಎಟಿಎಂ ವ್ಯಾನ್ ಹಿಂಬಾಲಿಸಿದ ದರೋಡೆಕೋರರು ಎಟಿಎಂ ಇರುವ ಬ್ಯಾಂಕ್ ಮುಂದೆ ಹಣದ ಟ್ರಂಕ್ ನ್ನು ವ್ಯಾನ್ ನಿಂದ ಕೆಳಗಿಳಿಸುತ್ತಿದ್ದಾಗ ದಾಳಿ ಮಾಡಿದ್ದರು. ಇಬ್ಬರು ಮುಸುಕುಧಾರಿ ದರೋಡೆಕೋರರು ಎಟಿಎಂ ವಾಹನ ಸಿಬ್ಬಂದಿ ಮೇಲೆ ಐದು ಸುತ್ತು ಗುಂಡು ಹಾರಿಸಿ, 93 ಲಕ್ಷ ರೂಪಾಯಿ ನಗದು ತುಂಬಿದ ಟ್ರಂಕ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದರು.
ಗುಂಡಿನ ದಾಳಿ ನಡೆಸುವ ಮುನ್ನ ದರೋಡೆಕೋರರು ಕಾವಲುಗಾರರ ಮೇಲೆ ಮೆಣಸಿನ ಪುಡಿ ಎರಚಿದ್ದರು. ದಾಳಿ ವೇಳೆ ಎಟಿಎಂ ವ್ಯಾನ್ ಗಾರ್ಡ್ ಗಿರಿ ವೆಂಕಟೇಶ್ ಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್‌ಗೆ ಗಂಭೀರ ಗಾಯಗಳಾಗಿತ್ತು. ಎರಡು ದ್ವಿಚಕ್ರವಾಹನಗಳಲ್ಲಿ ಬಂದ ದರೋಡೆಕೋರರು ದಾಳಿ ನಡೆಸಿ ಹಣ ತುಂಬಿದ ಟ್ರಂಕ್ ತೆಗೆದುಕೊಂಡು ಪರಾರಿಯಾಗಿದ್ದರು.