ಹೊಸದಿಗಂತ ವರದಿ, ಬೀದರ್
ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ನಯೀಮ್, ಜಾವೇದ್ ಹಾಗೂ ಅರುಣ್ ಪಾಲ್ ಸ್ಮರಣಾರ್ಥ ಫುಟ್‍ಬಾಲ್ ಟೂರ್ನಮೆಂಟ್‍ನ ಸೆಮಿಫೈನಲ್ ಪಂದ್ಯದಲ್ಲಿ ಗೋವಾ ಪೊಲೀಸ್ ತಂಡವು ಹೈದರಾಬಾದ್‍ನ ಫಲಕನುಮಾ ಎಫ್.ಸಿ. ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.
ಪಂದ್ಯದ ಅಂತಿಮ ಹಂತದವರೆಗೂ ಎರಡೂ ತಂಡಗಳು ಸಮಬಲದ ಪೈಪೋಟಿ ನೀಡಿದವು. ಎದುರಾಳಿ ಗೋಲು ದಾಖಲಿಸದಂತೆ ನೋಡಿಕೊಂಡವು. ಹೀಗಾಗಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವ ಕುತೂಹಲ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಕಾಡಿತ್ತು. ಪಂದ್ಯ ಮುಕ್ತಾಯಕ್ಕೆ ಇನ್ನೂ 10 ನಿಮಿಷ ಇರುವಾಗ ಗೋವಾ ತಂಡ ಗೋಲು ಬಾರಿಸಿ ಗೆಲುವಿನ ಕೇಕೆ ಹಾಕಿತು.
ಮೀನಾ ಓರೆಲಾ ಹೊಡೆದ ಅದ್ಭುತ ಗೋಲು ಗೋವಾ ತಂಡವನ್ನು ಫೈನಲ್‍ಗೆ ತಲುಪಿಸಿತು. ಗೋಲು ಗಳಿಸಲು ಹೈದರಾಬಾದ್ ತಂಡದ ಆಟಗಾರರು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ.
ಇದಕ್ಕೂ ಮುನ್ನ ನಡೆದ ಬೀದರ್ ಜೈನೊದ್ದಿನ್ ಕ್ಲಬ್ ಹಾಗೂ ಗೋವಾ ಪೊಲೀಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಗೋವಾ ತಂಡ 3-0 ರಲ್ಲಿ ಜಯಭೇರಿ ಬಾರಿಸಿತು. ತಂಡದ ನವೀನ್, ರೋಹಿತ್ ಹಾಗೂ ಭುವನೇಶ ತಲಾ ಒಂದು ಗೋಲು ಗಳಿಸಿ ತಂಡದ ಅಮೋಘ ಗೆಲುವಿಗೆ ಕಾರಣರಾದರು.
ಬೀದರ್ ಶಾಲಿಮಾರ್ ಮತ್ತು ಹೈದರಾಬಾದ್ ಫಲಕನುಮಾ ಎಫ್.ಸಿ. ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡ 2-0 ರಲ್ಲಿ ಸುಲಭ ಜಯ ಗಳಿಸಿತು. ಹೈದರಾಬಾದ್ ತಂಡದ ರೆಹಾನ್ ಹಾಗೂ ಲುಕ್‍ಮಾನ್ ತಲಾ ಒಂದು ಗೋಲು ಬಾರಿಸಿದರು.
ನಾಂದೇಡ್ ಲುಕ್‍ಮಾನ್ ಮತ್ತು ಕೇರಳ ಫೆಡರಲ್ ನಡುವಿನ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿತ್ತು. ಪಂದ್ಯದ ಬಹಳ ಹೊತ್ತಿನವರೆಗೂ ಎರಡೂ ತಂಡಗಳ ಆಟಗಾರರಿಗೆ ಯಾವುದೇ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ. ಅಂತಿಮ ಕ್ಷಣದಲ್ಲಿ ನಾಂದೇಡ್‍ನ ಎಂ.ಡಿ. ಆಮೇದ್ ಬಾರಿಸಿದ ಗೋಲು ತಂಡಕ್ಕೆ ಗೆಲುವಿನ ಗೋಲು ಆಯಿತು.
ಭಾನುವಾರ ಮುಂಬೈ ಹಾಗೂ ನಾಂದೇಡ್ ತಂಡಗಳ ಮಧ್ಯೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ವಿಜೇತರು ಫೈನಲ್‍ನಲ್ಲಿ ಗೋವಾ ಪೊಲೀಸ್ ತಂಡವನ್ನು ಎದುರಿಸಲಿದ್ದಾರೆ. ಮೊದಲ ಸೆಮಿಫೈನಲ್ ಹಾಗೂ ಎರಡನೇ ಸೆಮಿಫೈನಲ್‍ನಲ್ಲಿ ಸೋತ ತಂಡಗಳು ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಸಂಜೆ 4ಕ್ಕೆ ಫೈನಲ್ ಪಂದ್ಯ ಜರುಗಲಿದೆ.
ಟೂರ್ನಮೆಂಟ್‍ನಲ್ಲಿ ಪ್ರತಿ ದಿನವೂ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಶನಿವಾರ ಭಾರಿ ಸಂಖ್ಯೆಯಲ್ಲಿ ಆಗಮಿಸಿದ ಪ್ರೇಕ್ಷಕರು ಫುಟ್‍ಬಾಲ್ ಪಂದ್ಯಗಳ ರೋಚಕ ಕ್ಷಣಗಳನ್ನು ಆನಂದಿಸಿದರು.
ಭಾನುವಾರದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ವೀಕ್ಷಣೆಗೆ ಫುಟ್‍ಬಾಲ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಆಟಗಾರರನ್ನು ಪ್ರೋತ್ಸಾಹಿಸಬೇಕು ಎಂದು ಟೂರ್ನಮೆಂಟ್ ಪ್ರಾಯೋಜಕ, ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನಾನ್ ಸೇಠ್ ಮನವಿ ಮಾಡಿದ್ದಾರೆ.