July 4, 2026
Saturday, July 4, 2026
spot_img

‘ಬಾಲಕಾರ್ಮಿಕ’ರ ಮಾಲಕರ ವಿರುದ್ಧ ಬಿಗ್ ಆಕ್ಷನ್: ತೆಂಗಿನಕಾಯಿ ಕಾರ್ಖಾನೆಯಿಂದ 7 ಮಕ್ಕಳ ರಕ್ಷಣೆ

ಹೊಸದಿಗಂತ ವರದಿ ತುಮಕೂರು:

ತಿಪಟೂರು ನಗರದ ಹಳೇಪಾಳ್ಯ–ಕಲ್ಕೆರೆ ರಸ್ತೆಯಲ್ಲಿರುವ ಮಹದೇವ ಆಗ್ರೋ ಇಂಡಸ್ಟ್ರಿಯಲ್ ತೆಂಗಿನಕಾಯಿ ಸಂಸ್ಕರಣಾ ಕಾರ್ಖಾನೆಯ ಮೇಲೆ ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಶುಕ್ರವಾರ ಜಂಟಿಯಾಗಿ ದಾಳಿ ನಡೆಸಿ, ಕೆಲಸ ಮಾಡುತ್ತಿದ್ದ ಏಳು ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ.

ಕಾರ್ಮಿಕ ಇಲಾಖೆಗೆ ಬಂದಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಖಾನೆಯಲ್ಲಿ ತೆಂಗಿನಕಾಯಿ ಒಡೆಯುವುದು, ಚಿಪ್ಪು ತೆಗೆಯುವುದು, ಸೌದೆ ಸಾಗಿಸುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.

ದಾಳಿ ವೇಳೆ ಐದು ಬಾಲಕಿಯರು ಹಾಗೂ ಇಬ್ಬರು ಬಾಲಕರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಅವರ ವಯಸ್ಸು 9 ರಿಂದ 14 ವರ್ಷದೊಳಗಿನವರಾಗಿದ್ದು ಎನ್ನಲಾಗಿದ್ದು ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಸಂಬಂಧ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಂಗಿನ ಕಾಯಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳು ಮೆಲ್ನೂಟಕ್ಕೆ ಬಿಹಾರ ರಾಜ್ಯದವರು ಎಂದು ತಿಳಿದಿದೆ.

ಇದನ್ನೂ ಓದಿ:

ರಕ್ಷಿಸಲ್ಪಟ್ಟ ಮಕ್ಕಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ, ಮುಂದಿನ ಆರೈಕೆ, ಸಮಾಲೋಚನೆ ಹಾಗೂ ಪುನರ್ವಸತಿ ಕ್ರಮಕ್ಕಾಗಿ ಅವರನ್ನು ತುಮಕೂರಿನ ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ದಾಳಿಯ ಮಾಡುವ ಮೊದಲ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದ್ದು, ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸುವುದು ಕಾನೂನುಬಾಹಿರವಾಗಿದ್ದು, ಕಾರ್ಖಾನೆ ಮಾಲೀಕರ ವಿರುದ್ಧ ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಕಳೆದ ವಾರ ತಿಪಟೂರಿನ ನಗರದ ಎಸ್ ಬಿ ಐ ಬ್ಯಾಂಕ್ ಪಕ್ಕದಲ್ಲಿನ ಕಲ್ಪತರು ಜ್ಯೂಸ್ ಸೆಂಟರ್‍ನಲ್ಲಿಯೂ ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಣೆ ಮಾಡಲಾಗಿದ್ದು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ. ತಿಪಟೂರಿನ ಹಲವಡೆ ಈಗಲೂ ಬಾಲಕಾರ್ಮಿಕರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುವಾಗತ್ಯವಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !