July 13, 2026
Monday, July 13, 2026
spot_img

ಇಸ್ರೇಲ್ ಗದ್ದುಗೆಗೆ ಬಿಗ್ ಫೈಟ್: ನೆತನ್ಯಾಹು ಭವಿಷ್ಯ ಬದಲಿಸಲಿದೆಯೇ ಅಕ್ಟೋಬರ್ ಸಮರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಜಾ ಮತ್ತು ಲೆಬನಾನ್‌ನಲ್ಲಿ ಭೀಕರ ಮಿಲಿಟರಿ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ, ಇಸ್ರೇಲ್‌ನಲ್ಲಿ ಅಕ್ಟೋಬರ್ 27 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಸಂಸತ್ತು ಪ್ರಕಟಿಸಿದೆ. 1988ರ ನಂತರ, ಅಂದರೆ ಬರೋಬ್ಬರಿ 40 ವರ್ಷಗಳ ಇತಿಹಾಸದಲ್ಲಿ ಮಧ್ಯಂತರ ವಿಸರ್ಜನೆ ಇಲ್ಲದೆ 4 ವರ್ಷಗಳ ಪೂರ್ಣಾವಧಿ ಪೂರೈಸಿ ದೇಶ ಚುನಾವಣೆಗೆ ಹೋಗುತ್ತಿರುವುದು ಇದೇ ಮೊದಲು. ಜುಲೈ 17ಕ್ಕೆ ಹಾಲಿ ಸಂಸತ್ತಿನ ಅವಧಿ ಮುಗಿಯಲಿದ್ದು, ಆಡಳಿತಾರೂಢ ಒಕ್ಕೂಟವು ನೂರಾರು ಕಾನೂನು ಹಾಗೂ 9 ಬಜೆಟ್‌ಗಳನ್ನು ಯಶಸ್ವಿಯಾಗಿ ಅಂಗೀಕರಿಸಿದೆ ಎಂದು ಒಕ್ಕೂಟದ ಸಚೇತಕ ಓಫಿರ್ ಕಾಟ್ಜ್ ತಿಳಿಸಿದ್ದಾರೆ.

ನೆತನ್ಯಾಹುಗೆ ಕಠಿಣ ಹಾದಿ

ದೇಶದ ಇತಿಹಾಸದಲ್ಲೇ ದೀರ್ಘಕಾಲ ಪ್ರಧಾನಿಯಾಗಿರುವ 76 ವರ್ಷದ ಬೆಂಜಮಿನ್ ನೆತನ್ಯಾಹು ಈಗಾಗಲೇ 6 ಅವಧಿ ಮುಗಿಸಿದ್ದು, 7ನೇ ಬಾರಿಗೆ ಅಧಿಕಾರ ಹಿಡಿಯಲು ಸಜ್ಜಾಗಿದ್ದಾರೆ. ಆದರೆ, ಈ ಬಾರಿ ಅವರಿಗೆ ಗೆಲುವು ಸುಲಭವಿಲ್ಲ ಎಂದು ಜಾಗತಿಕ ಸಮೀಕ್ಷೆಗಳು ಹೇಳುತ್ತಿವೆ.

ಸಮೀಕ್ಷೆಗಳು ನುಡಿದ ಭವಿಷ್ಯ

ಒಟ್ಟು 120 ಸ್ಥಾನಗಳ ಇಸ್ರೇಲ್ ಸಂಸತ್ತಿನಲ್ಲಿ ಬಹುಮತಕ್ಕೆ 61 ಸೀಟುಗಳ ಅಗತ್ಯವಿದೆ. ‘ದಿ ಎಕನಾಮಿಸ್ಟ್’ ಪತ್ರಿಕೆಯ ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ನೆತನ್ಯಾಹು ಅವರ ಲಿಕುಡ್ ಪಕ್ಷ ಒಳಗೊಂಡ 5 ಪಕ್ಷಗಳ ಬಲಪಂಥೀಯ ಒಕ್ಕೂಟವು ಕೇವಲ 54 ಸ್ಥಾನ ಗಳಿಸಲಷ್ಟೇ ಶಕ್ತವಾಗಬಹುದು. ಮತ್ತೊಂದೆಡೆ, ವಿರೋಧ ಪಕ್ಷಗಳ ಒಕ್ಕೂಟವು 65 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !