Wednesday, September 3, 2025

BIG NEWS | ಸಚಿವ ನಿತಿನ್ ಗಡ್ಕರಿ ನಿವಾಸಕ್ಕೆ ಬಾಂಬ್ ಬೆದರಿಕೆ: ಶಂಕಿತ ವ್ಯಕ್ತಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಬಾಂಬ್ ಇಟ್ಟೆನೆಂಬ ಬೆದರಿಕೆ ಕರೆ ಬಂದಿದ್ದು, ಶಂಕಿತರೊಬ್ಬನನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ 8.46ಕ್ಕೆ ಗಡ್ಕರಿಯವರ ನಾಗ್ಪುರ ನಿವಾಸಕ್ಕೆ ಬಾಂಬ್ ಇಡಲಾಗುತ್ತಿದೆ ಎಂಬ ಕರೆ ಬಂದಿತ್ತು. ವಾರ್ಧಾ ರಸ್ತೆಯಲ್ಲಿರುವ ಗಡ್ಕರಿ ಅವರ ಮನೆಗೆ 10 ನಿಮಿಷಗಳಲ್ಲಿ ಸ್ಫೋಟ ಸಂಭವಿಸಬಹುದು ಎಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಬೆದರಿಕೆ ಹಾಕಿದ್ದ.

ಸೂಚನೆ ಸಿಕ್ಕ ತಕ್ಷಣ ಪೊಲೀಸರು ಸ್ಥಳೀಯ ಪ್ರತಾಪ್ ನಗರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದರು. ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ತಕ್ಷಣವೇ ತನಿಖೆಗೆ ಮುಂದಾಗಿ, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದರು. ಅಧಿಕಾರಿಗಳ ಪ್ರಕಾರ, ಶಂಕಿತನನ್ನು ಉಮೇಶ್ ವಿಷ್ಣು ರಾವತ್ ಎಂದು ಗುರುತಿಸಲಾಗಿದೆ. ಮಹಲ್‌ನ ತುಳಸಿ ಬಾಗ್ ರಸ್ತೆಯ ನಿವಾಸಿಯಾಗಿರುವ ಈ ವ್ಯಕ್ತಿ, ಮೆಡಿಕಲ್ ಚೌಕ್ ಬಳಿ ಇರುವ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.

ರಾವತ್ ತನ್ನ ಮೊಬೈಲ್‌ ಫೋನ್‌ ಬಳಸಿ ಈ ಬೆದರಿಕೆ ಕರೆ ಮಾಡಿದ್ದಾನೆ. ಪೊಲೀಸರು ಆತನನ್ನು ನಾಗ್ಪುರದ ಬಿಮಾ ಆಸ್ಪತ್ರೆ ಬಳಿಯಿಂದ ಪತ್ತೆಹಚ್ಚಿ ಬಂಧಿಸಿದ್ದಾರೆ. ಇತ್ತ, ಗಡ್ಕರಿ ನಿವಾಸದ ಸುತ್ತ ಭದ್ರತಾ ಕ್ರಮಗಳನ್ನು ಕೂಡ ಹೆಚ್ಚಿಸಲಾಗಿದೆ. ಪೊಲೀಸರು ಈ ಬೆದರಿಕೆಯ ಹಿಂದಿರುವ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ತನಿಖೆ ಮುಂದುವರಿಸುತ್ತಿದ್ದಾರೆ.

ಇದನ್ನೂ ಓದಿ