ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಯ (BJP) ಹಿರಿಯ ನಾಯಕ,ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ (DV Sadananda Gowda) ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ, ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಅವರು ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು (Bengaluru North Lok Sabha Constituency) ಪ್ರತಿನಿಧಿಸುತ್ತಿದ್ದಾರೆ.
‘ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷಗಳ ಕಾಲ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಏಳು ವರ್ಷ ಸಂಪುಟ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಹೆಚ್ಚು ಆಸೆಪಟ್ಟರೆ, ಜನ ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆ’ ಎಂದು ಗೌಡರು ಹೇಳಿದರು.
2021ರಲ್ಲಿ ಕೇಂದ್ರ ಸಚಿವರ ಪುನಾರಚನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಅವರು ಕೇಂದ್ರ ಸಚಿವ ಸ್ಥಾನ ತ್ಯಜಿಸಿದ್ದರು.