Wednesday, September 3, 2025

BIG NEWS | ಅಮೆರಿಕಕ್ಕೆ ಭಾರತದ ಸೆಡ್ಡು: ರಷ್ಯಾ ಅಧ್ಯಕ್ಷ ಪುಟಿನ್‌ ಜತೆ ಪ್ರಧಾನಿ ಮೋದಿ ಮಾತುಕತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತ-ಅಮೆರಿಕ ನಡುವಿನ ಸುಂಕ ಸಮರದ ನಡುವೆ ಪ್ರಧಾನಿ ನರೇಂದ್ರ ಮೋದಿ ರಷ್ಯಾದೊಂದಿಗೆ ದೇಶದ ಸಂಬಂಧ ವೃದ್ಧಿಸುವತ್ತ ಗಮನಾರ್ಹ ಹೆಜ್ಜೆ ಇಟ್ಟಿದೆ. ಇದರ ಮೊದಲ ಹೆಜ್ಜೆಯಾಗಿ ಮೋದಿ ಅವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಈ ವೇಳೆ ಇಬ್ಬರು ನಾಯಕರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಮತ್ತು ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಘೋಷಣೆಗಳಿಂದ ಉಂಟಾದ ಜಾಗತಿಕ ವ್ಯಾಪಾರ ಅನಿಶ್ಚಿತತೆಯ ನಡುವೆಯೇ ಇಬ್ಬರು ನಾಯಕರು ಸಂಭಾಷಣೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.

ಪುಟಿನ್‌ ಜತೆ ನಡೆಸಿದ ಸಂಭಾಷಣೆ ಬಗ್ಗೆ ಮೋದಿ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ‘ಸ್ನೇಹಿತ ಪುಟಿನ್‌ ಜತೆ ಉತ್ತಮ ಮತ್ತು ಸುದೀರ್ಘ ಮಾತುಕತೆ ನಡೆಸಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಜತೆಗೆ ನಾವು ದ್ವಿಪಕ್ಷೀಯ ಸಂಬಂಧಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ನಮ್ಮ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದ್ದೇವೆ ಮತ್ತು ಭಾರತ-ರಷ್ಯಾ ನಡುವಿನ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ. ಈ ವರ್ಷದ ಕೊನೆಯಲ್ಲಿ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದು, ಇದಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗುರುವಾರ ಕ್ರೆಮ್ಲಿನ್‌ನಲ್ಲಿ ಪುಟಿನ್‌ ಅವರನ್ನು ಭೇಟಿ ಮಾಡಿದ 24 ಗಂಟೆಗಳ ಒಳಗೆ ಈ ಮಾತುಕತೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ