BIG NEWS | ಮಂಕಿಪಾಕ್ಸ್: WHOನಿಂದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವಕ್ಕೆ ಆತಂಕ ಮೂಡಿಸಿದ ಮಂಕಿಪಾಕ್ಸ್ ಇದೀಗ ಎಲ್ಲೆಡೆ ಹೆಚ್ಚಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಗುರುತಿಸಲು ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ , ‘ಜಾಗತಿಕ ಮಂಕಿಪಾಕ್ಸ್ ಸಾಂಕ್ರಾಮಿಕವು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ನಾನು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ.

ಜುಲೈ 20ರಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಮಂಕಿಪಾಕ್ಸ್ ಪ್ರಕರಣ ಇದೀಗ 70 ದೇಶದಲ್ಲಿ ಕಾಣಿಸಿಕೊಂಡಿದೆ. ನಿಯಂತ್ರಣ ಮೀರಿ ಮಂಕಿಪಾಕ್ಸ್ ಪ್ರಕರಣ ದೇಶಗಳನ್ನು ವ್ಯಾಪಿಸುತ್ತಿದೆ. ಈಗಾಗಲೇ 15,800ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ. ಆದರೆ ಮಾರಕ ವೈರಸ್ ಇದಾಗಿದ್ದು, ಅತೀವ ಎಚ್ಚರಿಕೆ ವಹಿಸುವ ಅಗತ್ಯವಿದೆ. ತೀವ್ರಗತಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಹರಡುತ್ತಿದೆ. ಆರಂಭದಲ್ಲೇ ಈ ಕುರಿತು ಎಚ್ಚರಿಕೆ ವಹಿಸದಿದ್ದರೆ ಎಲ್ಲಾ ದೇಶಕ್ಕೆ ಮಾರಕವಾಗಬುಹುದು ಎಂದು ಹೇಳಿದ್ದಾರೆ.

ಪಶ್ಚಿಮ ಮತ್ತು ಮಧ್ಯ ಆಫ್ರಿಕನ್ ದೇಶಗಳ ಹೊರಗೆ ಮೇ ತಿಂಗಳ ಆರಂಭದಿಂದ ಮಂಕಿಪಾಕ್ಸ್ ಸೋಂಕುಗಳಲ್ಲಿ ಏರಿಕೆ ಕಂಡುಬಂದಿದೆ. ಭಾರತದಲ್ಲೂ ಈಗಾಗಲೇ 3 ಪ್ರಕರಣಗಳು ದೃಢವಾಗಿದೆ.

ಸದ್ಯ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸುವ ಅನಿವಾರ್ಯತೆ ಇದೆ. ಎಲ್ಲಾ ದೇಶಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿ ಕೈಮೀರಿದರೆ ಮಂಕಿಪಾಕ್ಸ್ ನಿಯಂತ್ರಣ ಮಾಡುವುದು ಸವಾಲಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಸದ್ಯ ಮಂಕಿಪಾಕ್ಸ್ ಪ್ರಕರಣಕ್ಕೆ ಯಾವುದೇ ವಿಶೇಷ ಚಿಕಿತ್ಸೆ ಇಲ್ಲ. ಜ್ವರ ಸೇರಿದಂತೆ ಇತರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಿ ಮಂಕಿಪಾಕ್ಸ್ ಸೋಂಕಿತನನ್ನು ಅಪಾಯದಿಂದ ಪಾರು ಮಾಡಬಹುದು. ಹೀಗಾಗಿ ಸೋಂಕು ಹರಡದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!