ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರ ಜನತೆಗೆ ಶಾಕ್ ನೀಡಿದ್ದು, ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಒಂದು ಲೀಟರ್ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದರಿಂದ ಒಂದು ಲೀಟರ್ ಡೀಸೆಲ್‌ಗೆ ರಾಜ್ಯದ ಜನ 89.20 ರೂ. ನೀಡಬೇಕಾದರೆ, ಲೀಟರ್ ಪೆಟ್ರೋಲ್‌ಗೆ 103 ಆಗಲಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಇದುವರೆಗೆ ಪೆಟ್ರೋಲ್‌ಗೆ ರಾಜ್ಯ ಸರ್ಕಾರವು ಶೇ.25.92ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಈಗ ಶೇ.3.9ರಷ್ಟು ಹೆಚ್ಚಳ ಮಾಡಿದ್ದು, ಇನ್ನು ಮುಂದೆ ಒಟ್ಟು ಶೇ.29.84ರಷ್ಟು ತೆರಿಗೆ ವಸೂಲಿ ಮಾಡಲಿದೆ. ಇನ್ನು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.4.1ರಷ್ಟು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಇನ್ನು ಶೇ.18.44ರಷ್ಟು ತೆರಿಗೆ ವಸೂಲಿ ಮಾಡಲಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆ ಏರಿಕೆ ಕುರಿತು ಕಳೆದ ಮಾರ್ಚ್‌ನಲ್ಲಿಯೇ ಆರ್ಥಿಕ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಬೆಲೆಯೇರಿಕೆ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ, ಮತಗಳು ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಕಡತ ವಾಪಸ್ ಕಳುಹಿಸಿದ್ದರು. ಈಗ ಮತ್ತೆ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆತೀಕ್ ಅವರು ಸಿದ್ದರಾಮಯ್ಯ ಅವರ ಎದುರು ಕಡತ ಮುಂದಿರಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ.