July 10, 2026
Friday, July 10, 2026
spot_img

ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ರಿಲೀಫ್: ಬಂಧನಕ್ಕೆ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್‌ನ ಪ್ರಮುಖ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂ ಕೋರ್ಟ್ ದೊಡ್ಡ ಮಟ್ಟದ ಕಾನೂನು ಸಮಾಧಾನ ನೀಡಿದೆ. ಅಸ್ಸಾಂ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಖೇರಾ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ಗುವಾಹಟಿ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರಿದ್ದ ದ್ವಿಸದಸ್ಯ ಪೀಠವು ಈ ತೀರ್ಪು ಪ್ರಕಟಿಸಿದೆ. ಪ್ರಕರಣದ ಗತಿಯನ್ನು ಗಮನಿಸಿದ ಪೀಠವು, ಇದು ರಾಜಕೀಯ ದ್ವೇಷದ ಕ್ರಮದಂತೆ ಕಾಣಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡುವುದು ನ್ಯಾಯಾಲಯದ ಜವಾಬ್ದಾರಿ ಎಂದು ಹೇಳುವ ಮೂಲಕ ಬಂಧನದ ಭೀತಿಯಲ್ಲಿದ್ದ ಖೇರಾ ಅವರಿಗೆ ರಕ್ಷಣೆ ನೀಡಿದೆ.

ಪವನ್ ಖೇರಾ ಅವರು ಸುದ್ದಿಗೋಷ್ಠಿಯೊಂದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ರಿನಿಕಿ ಅವರು ವಿದೇಶಗಳಲ್ಲಿ ಹಲವು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಮತ್ತು ಅಮೆರಿಕದಲ್ಲಿ ಅಕ್ರಮ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಖೇರಾ ದೂರಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ, ನಕಲಿ ದಾಖಲೆ ಸೃಷ್ಟಿ ಮತ್ತು ಕ್ರಿಮಿನಲ್ ಪಿತೂರಿಯಡಿ ಎಫ್‌ಐಆರ್ ದಾಖಲಿಸಲಾಗಿತ್ತು.

ಏಪ್ರಿಲ್ 10: ತೆಲಂಗಾಣ ಹೈಕೋರ್ಟ್‌ನಿಂದ ಒಂದು ವಾರದ ಸಾರಿಗೆ ಜಾಮೀನು ಸಿಕ್ಕಿತ್ತು.

ಏಪ್ರಿಲ್ 24: ಗುವಾಹಟಿ ಹೈಕೋರ್ಟ್ ಖೇರಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. “ಆರೋಪಗಳನ್ನು ಸಾಬೀತುಪಡಿಸದೆ ಮಹಿಳೆಯೊಬ್ಬರನ್ನು ರಾಜಕೀಯಕ್ಕೆ ಎಳೆದಿದ್ದೀರಿ” ಎಂದು ಹೈಕೋರ್ಟ್ ಅಂದು ಕಿಡಿಹೊಡೆದಿತ್ತು.

ಹೈಕೋರ್ಟ್ ಆದೇಶದ ವಿರುದ್ಧ ಖೇರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಹೇಳಿಕೆಗಳು ಕೇವಲ ರಾಜಕೀಯ ವಾಕ್ಚಾತುರ್ಯ ಮಾತ್ರ ಎಂದು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಅಂತಿಮವಾಗಿ ಅವರಿಗೆ ಜಾಮೀನು ನೀಡಿದೆ.

ಈ ತೀರ್ಪಿನಿಂದಾಗಿ ಅಸ್ಸಾಂ ಪೊಲೀಸರಿಂದ ಬಂಧನಕ್ಕೊಳಗಾಗುವ ಆತಂಕದಲ್ಲಿದ್ದ ಪವನ್ ಖೇರಾ ಅವರಿಗೆ ಸದ್ಯಕ್ಕೆ ದೊಡ್ಡ ಮಟ್ಟದ ಜಯ ಸಿಕ್ಕಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !