October 9, 2026
Friday, October 9, 2026
spot_img

ಬರದ ನಡುವೆ ರೈತರಿಗೆ ಬಿಗ್ ರಿಲೀಫ್: ಬಲವಂತದ ಸಾಲ ವಸೂಲಾತಿ ಇಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರದ ಬಿಸಿಲಿಗೆ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಸಾಲ ಮರುಪಾವತಿಯಲ್ಲಿ ವಿಶೇಷ ಪರಿಹಾರ ಒದಗಿಸಿದೆ.

ಬರಪೀಡಿತ ತಾಲೂಕುಗಳ ರೈತರಿಂದ ಈ ವರ್ಷ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿ ಮಾಡದಂತೆ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ಹೆಚ್ಚುವರಿ ಕಾಲಾವಕಾಶ ಕಲ್ಪಿಸಲಾಗಿದೆ.

12 ತಿಂಗಳ ಕಾಲಾವಕಾಶ

ಬರಪೀಡಿತ ತಾಲೂಕುಗಳಲ್ಲಿನ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ವಿಶೇಷ ಪರಿಹಾರ ಯೋಜನೆ ಜಾರಿಗೆ ತರಲಾಗಿದ್ದು, ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶ ನೀಡಲಾಗಿದೆ. ಅಂದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ರೈತರು ತಕ್ಷಣ ಸಾಲದ ಕಂತು ಪಾವತಿಸಬೇಕಾದ ಒತ್ತಡದಿಂದ ಸ್ವಲ್ಪಮಟ್ಟಿಗೆ ಮುಕ್ತರಾಗಲಿದ್ದಾರೆ. ಸಾಲ ವಸೂಲಾತಿ ಪ್ರಕ್ರಿಯೆಯಲ್ಲೂ ರೈತರಿಗೆ ತೊಂದರೆಯಾಗದಂತೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ:

ಯಾರಿಗೆ ಎಷ್ಟು ತಿಂಗಳ ಕಾಲಾವಕಾಶ?

ಈ ಪರಿಹಾರ ಯೋಜನೆಯ ವ್ಯಾಪ್ತಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ಕೃಷಿ ಸಾಲ, ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ಕೃಷಿ ಸಂಬಂಧಿತ ವಿವಿಧ ಸಾಲಗಳಿಗೆ 12 ತಿಂಗಳ ಕಾಲಾವಕಾಶ, ಸಾಮಾನ್ಯ ಬರಪೀಡಿತ ತಾಲೂಕುಗಳಲ್ಲಿ 36 ತಿಂಗಳು ಅಂದರೆ ಮೂರು ವರ್ಷಗಳವರೆಗೆ ವಿಸ್ತರಿಸಲಾಗಿದೆ. ತೀವ್ರ ಬರಪೀಡಿತ ತಾಲೂಕುಗಳಲ್ಲಿ ಈ ಅವಧಿಯನ್ನು 60 ತಿಂಗಳು ಅಂದರೆ ಐದು ವರ್ಷಗಳವರೆಗೆ ವಿಸ್ತರಿಸುವ ವ್ಯವಸ್ಥೆ ಮಾಡಲಾಗಿದೆ.

ಬರದಿಂದ ಬೆಳೆ ಹಾನಿ, ಆದಾಯ ಕುಸಿತ ಹಾಗೂ ಸಾಲದ ಒತ್ತಡ ಎದುರಿಸುತ್ತಿರುವ ರೈತರಿಗೆ ಈ ಕ್ರಮ ಸ್ವಲ್ಪ ಆರ್ಥಿಕವಾಗಿ ನೆಮ್ಮದಿ ನೀಡುವಂತಾಗಿದೆ. ಇದೇ ವೇಳೆ ಸಾಲ ಮರುಪಾವತಿ ಹಾಗೂ ವಸೂಲಾತಿಗೆ ಸಂಬಂಧಿಸಿದಂತೆ ರೈತರಿಂದ ದೂರುಗಳು ಬಂದರೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು ಎಂದು ಆದೇಶಿಸಲಾಗಿದೆ.

Must Read