ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿದ್ದ ಬಹುಕೋಟಿ ಡಾಲರ್‌ಗಳ ಕ್ರಿಮಿನಲ್ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.
ಅಮೆರಿಕದ ಫೆಡರಲ್ ನ್ಯಾಯಾಲಯವು ಗೌತಮ್ ಅದಾನಿ, ಅವರ ಸಂಬಂಧಿ ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ಶಾಶ್ವತವಾಗಿ ವಜಾಗೊಳಿಸಿದೆ. ಈ ಬೆಳವಣಿಗೆಯನ್ನು ಅದಾನಿ ಸ್ವಾಗತಿಸಿದ್ದು, ಸತ್ಯ ಮತ್ತು ನ್ಯಾಯದ ಮೇಲಿನ ತಮ್ಮ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನ ಬಳಿಕ ಅದಾನಿ ಹೇಳಿದ್ದೇನು?
ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಗೌತಮ್ ಅದಾನಿ, ಕಠಿಣ ಪರಿಸ್ಥಿತಿಯಲ್ಲೂ ಸತ್ಯ, ನ್ಯಾಯಸಮ್ಮತತೆ ಮತ್ತು ಕಾನೂನಿನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಗೌರವ ಹೊಂದಿದ್ದು, ತಮ್ಮ ಮೇಲೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲೂ ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳತ್ತ ಗಮನಹರಿಸುವುದಾಗಿ ಅವರು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
2024ರಲ್ಲಿ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಅದಾನಿ ಮತ್ತು ಇತರರ ವಿರುದ್ಧ ಆರೋಪಗಳನ್ನು ದಾಖಲಿಸಿದ್ದರು. ಭಾರತದಲ್ಲಿನ ಸೌರ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಲಂಚ ನೀಡುವ ಯೋಜನೆ ರೂಪಿಸಲಾಗಿತ್ತು ಹಾಗೂ ಅಮೆರಿಕದ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಲಾಗಿತ್ತು ಎಂಬ ಆರೋಪಗಳು ಪ್ರಕರಣದಲ್ಲಿದ್ದವು. ಅದಾನಿ ಸಮೂಹ ಈ ಆರೋಪಗಳನ್ನು ನಿರಂತರವಾಗಿ ನಿರಾಕರಿಸಿತ್ತು.
‘With Prejudice’ ಎಂದರೇನು?
ನ್ಯಾಯಾಲಯ ಪ್ರಕರಣವನ್ನು ‘with prejudice’ ಆಧಾರದ ಮೇಲೆ ವಜಾಗೊಳಿಸಿರುವುದರಿಂದ, ಇದೇ ಆರೋಪಗಳ ಆಧಾರದ ಮೇಲೆ ಮತ್ತೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಅವಕಾಶ ಇರುವುದಿಲ್ಲ. ಅಮೆರಿಕದ ನ್ಯಾಯಾಂಗದಲ್ಲಿ ಇದು ಪ್ರಕರಣದ ಅಂತ್ಯವನ್ನು ಸೂಚಿಸುವ ಪ್ರಮುಖ ಕಾನೂನು ಕ್ರಮವಾಗಿದೆ.
ಅದಾನಿ ಸಮೂಹಕ್ಕೆ ದೊಡ್ಡ ಕಾನೂನು ನಿರಾಳತೆ
ಈ ತೀರ್ಪಿನಿಂದ ಅದಾನಿ ಸಮೂಹದ ಮೇಲೆ ಹಲವು ವರ್ಷಗಳಿಂದ ಇದ್ದ ಪ್ರಮುಖ ಕ್ರಿಮಿನಲ್ ಪ್ರಕರಣದ ಕಾನೂನು ಒತ್ತಡ ಕಡಿಮೆಯಾಗಿದೆ. ಪ್ರಕರಣದ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಅದಾನಿ ಸಮೂಹದ ವ್ಯವಹಾರ ಮತ್ತು ಹೂಡಿಕೆದಾರರ ಗಮನ ಸೆಳೆದಿತ್ತು.
2023ರಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಪ್ರಕಟಿಸಿದ ಬಳಿಕ ಅದಾನಿ ಸಮೂಹದ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಸಮೂಹವು ಆರೋಪಗಳನ್ನು ತಳ್ಳಿಹಾಕಿದ್ದರೂ, ಅದರ ಷೇರುಗಳು ಮತ್ತು ವ್ಯವಹಾರಗಳ ಕುರಿತು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆ ನಡೆದಿತ್ತು.



