ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬಿಗ್ ರಿಲೀಫ್: ನಿಷೇಧ ವಾಪಾಸ್ ಪಡೆದ ICC

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ (Sri Lanka Cricket) ಬಿಗ್ ರಿಲೀಫ್ ಸಿಕ್ಕಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಲಂಕಾ ಕ್ರಿಕೆಟ್ ಮಂಡಳಿಯ ಮೇಲೆ ಹೇರಿದ್ದ ನಿಷೇಧವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಹಿಂಪಡೆದಿದೆ.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ (ODI World Cup 2023) ಶ್ರೀಲಂಕಾ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಅಲ್ಲದೆ ಈ ಟೂರ್ನಿಗೂ ಮುನ್ನ ನಡೆದ ಏಷ್ಯಾಕಪ್ (Asia Cup 2023) ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ತನ್ನ ತವರು ಮೈದಾನದಲ್ಲೇ ಭಾರತದ ವಿರುದ್ಧ ಕೇವಲ 50 ರನ್​ಗಳಿಗೆ ಆಲೌಟ್ ಆಗಿತ್ತು. ತಂಡದ ಕಳಪೆ ಪ್ರದರ್ಶನದಿಂದಾಗಿ ಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಇದಾದ ನಂತರ ಲಂಕಾ ಕ್ರಿಕೆಟ್​ ಮಂಡಳಿಯನ್ನು ವಜಾಗೊಳಿಸಿ ಶ್ರೀಲಂಕಾ ಸರ್ಕಾರ ಆದೇಶ ಹೊರಡಿಸಿತ್ತು. ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಒಪ್ಪದ ಐಸಿಸಿ, ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ತೀರ್ಮಾನಕ್ಕೆ ಬಂದು ಲಂಕಾ ಮಂಡಳಿಯ ಮೇಲೆ ನಿಷೇಧದ ಶಿಕ್ಷೆ ವಿಧಿಸಿತ್ತು.

10 ನವೆಂಬರ್ 2023 ರಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಿದ ಐಸಿಸಿ ಲಂಕಾ ಮಂಡಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಇದರಿಂದಾಗಿ ಶ್ರೀಲಂಕಾ ಐಸಿಸಿ ಅಂಡರ್ 19 ವಿಶ್ವಕಪ್ ಆತಿಥ್ಯದಿಂದ ವಂಚಿತವಾಯಿತು.

ಹಾಗೆಯೇ ಶ್ರೀಲಂಕಾ ಕ್ರಿಕೆಟ್ ದ್ವಿಪಕ್ಷೀಯ ಸರಣಿಗಳು ಮತ್ತು ಐಸಿಸಿ ಈವೆಂಟ್‌ಗಳಲ್ಲಿ ಆಡುವುದನ್ನು ಮುಂದುವರಿಸಲು ಅನುಮತಿ ನೀಡಿದ ಐಸಿಸಿ, ಮಂಡಳಿಗೆ ಯಾವುದೇ ಪ್ರಮುಖ ಪಂದ್ಯಾವಳಿಯನ್ನು ಆಯೋಜಿಸದಂತೆ ನಿರ್ಬಂಧ ಹೇರಿ ತೀರ್ಮಾನ ಕೈಗೊಂಡಿತ್ತು. ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಐಸಿಸಿ, ಮೇಲ್ವಿಚಾರಣೆ ನಡೆಸಿದ್ದು, ಇನ್ನು ಮುಂದೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದಾಗಿಯೂ ಹಾಗೂ ಐಸಿಸಿ ನಿಯಮಗಳನ್ನು ಪಾಲಿಸುವುದಾಗಿಯೂ ಒಪ್ಪಿಕೊಂಡಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!