ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿರುವ ಅನರ್ಹರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ.
ಅನರ್ಹ ಬಿಪಿಎಲ್ ಕಾರ್ಡ್ ಪಡಿತರದಾರರನ್ನು ಕೈ ಬಿಡುವ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಸಭೆಯಲ್ಲಿ ಅನರ್ಹ ಬಿಪಿಎಲ್ ಪಡಿತರದಾರರನ್ನು ಹಂತ ಹಂತವಾಗಿ ತೆಗೆದು ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅನರ್ಹ ಬಿಪಿಎಲ್ ಪಡಿತರದಾರರನ್ನು ಹಂತ ಹಂತವಾಗಿ ತೆಗೆದು ಹಾಕಬೇಕು. ಆದರೆ ಒಬ್ಬನೇ ಒಬ್ಬ ಅರ್ಹ ಬಿಪಿಎಲ್ ಕಾರ್ಡುದಾರನ ಬಿಪಿಎಲ್ ಕಾರ್ಡ್ ರದ್ದು ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಅನರ್ಹ ಬಿಪಿಎಲ್ ಪಡಿತರದಾರರು ಸ್ವಯಂ ತಮ್ಮ ಕಾರ್ಡ್ಗಳನ್ನು ಹಿಂತಿರುಗಿಸಲು ಕಾಲಾವಕಾಶ ನೀಡಬೇಕು. ಆ ಬಳಿಕ ಅಂತವರಿಗೆ ನೊಟೀಸ್ ನೀಡಿ ಕಾರ್ಡ್ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಒಟ್ಟು 1,53,69,945 ಪಡಿತರ ಚೀಟಿಗಳಲ್ಲಿ 5,30,88,636 ಸದಸ್ಯರು ಫಲಾನುಭವಿಗಳಿದ್ದಾರೆ. ಈಗಾಗಲೇ 4 ಸಾವಿರ ಸರ್ಕಾರಿ ನೌಕರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಯಡಿ 4692 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಅಕ್ಟೋಬರ್ ಅಂತ್ಯದವರೆಗೆ 3253 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದರಿಂದಾಗಿ 4,44,48,294 ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.