ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯ ಇಳಕಲ್ ಮನೆಯಲ್ಲಿ ಬ್ಲಾಸ್ಟ್ ಆದ ಹೇರ್ ಡ್ರೈಯರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೇರ್ ಡ್ರೈಯರ್‌ನಿಂದ ಮುಂಗೈ ಕತ್ತರಿಸಿಕೊಂಡಿರುವ ಬಸಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತ ಇಳಕಲ್ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೇರ್ ಡ್ರೈಯರ್ ಬ್ಲಾಸ್ಟ್ ಮಾಡಲು ಪ್ರೀ ಪ್ಲ್ಯಾನ್ ಮಾಡಲಾಗಿತ್ತು ಅನ್ನೋದು ಇಳಕಲ್ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆರೋಪಿ ಸಿದ್ದಪ್ಪ ಶೀಲವಂತ ಇಷ್ಟಕ್ಕೆಲ್ಲಾ ಕಾರಣ .
ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಕೈ ಕಳೆದುಕೊಂಡ ಬಸಮ್ಮ ಹಾಗೂ ಆರೋಪಿ ಸಿದ್ದಪ್ಪ ಶೀಲವಂತ ಮಧ್ಯೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಬಸಮ್ಮ-ಆರೋಪಿ ಸಿದ್ದಪ್ಪ ಸಂಬಂಧದ ಬಗ್ಗೆ ಸ್ನೇಹಿತೆ ಶಶಿಕಲಾ ತಕರಾರು ಮಾಡಿದ್ದರು. ಶಶಿಕಲಾ ಬುದ್ಧಿವಾದಕ್ಕೆ ಆರೋಪಿ ಸಿದ್ದಪ್ಪ ಕೋಪಗೊಂಡಿದ್ದರು. ಶಶಿಕಲಾರನ್ನು ಮುಗಿಸಲು ಸಿದ್ದಪ್ಪ ಮುಂದಾಗಿದ್ದು, ಆರೋಪಿ ಮಾಡಿದ್ದ ಪ್ಲಾನ್ ತನ್ನ ಪ್ರೇಯಸಿ ಬಸಮ್ಮರಿಗೆ ತಿರುಗು ಬಾಣವಾಗಿದೆ.
ಆರೋಪಿ ಸಿದ್ದಪ್ಪ ತಾನೇ ಹೇರ್ ಡ್ರೈಯರ್ ಖರೀದಿಸಿ ಅದು ಆನ್ ಮಾಡಿದ ಕೂಡಲೇ ಸ್ಫೋಟಗೊಳ್ಳುವಂತೆ ಡಿಟೊನೇಟರ್ ಬಳಸಿದ್ದ. ಬ್ಲಾಸ್ಟ್ ಆಗುವ ಹೇರ್ ಡ್ರೈಯರ್ ಅನ್ನು ಆರೋಪಿ ಕೊರಿಯರ್ ಮೂಲಕ ಶಶಿಕಲಾ ವಿಳಾಸಕ್ಕೆ ಕಳುಹಿಸಿದ್ದ.
ಆದ್ರೆ ಅದೃಷ್ಟವಶಾತ್ ಅಂದು ಶಶಿಕಲಾ ಊರಲ್ಲಿ ಇರಲಿಲ್ಲ. ಶಶಿಕಲಾ ತನ್ನ ಸ್ನೇಹಿತೆ ಬಸಮ್ಮಳಿಗೆ ಹೇರ್ ಡ್ರೈಯರ್ ಪಡೆಯುವಂತೆ ತಿಳಿಸಿದ್ದಾಳೆ. ಸ್ನೇಹಿತೆ ಶಶಿಕಲಾ ಹೇಳಿದಂತೆ ಬಸಮ್ಮ ಡಿಟಿಡಿಸಿ ಕೊರಿಯರ್ ಸೆಂಟರ್‌ಗೆ ತೆರಳಿ ಹೇರ್ ಡ್ರೈಯರ್ ಪಡೆದುಕೊಂಡಿದ್ದಾಳೆ.
ನವೆಂಬರ್ 15ರಂದು ಮನೆಗೆ ಕೊರಿಯರ್ ಬಾಕ್ಸ್ ತಂದ ಬಸಮ್ಮಳಿಗೆ ಕ್ಯೂರಿಯಾಸಿಟಿ ಹುಟ್ಟಿದೆ. ಕ್ಯೂರಿಯಾಸಿಟಿ ತಾಳದೇ ಹೇರ್ ಡ್ರೈಯರ್ ಆನ್ ಮಾಡಲು ಹೋಗಿದ್ದಾರೆ. ಹೇರ್ ಡ್ರೈಯರ್ ಆನ್ ಮಾಡ್ತಿದ್ದಂತೆ ಅದು ಬ್ಲಾಸ್ಟ್ ಆಗಿದೆ.
ಆರೋಪಿ ಸಿದ್ದಪ್ಪ ಶೀಲವಂತ ಕೊಪ್ಪಳದಲ್ಲಿ ಡಾಲ್ಫಿನ್ ಇಂಟರ್ನ್ಯಾಷನಲ್ ಗ್ರಾನೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎಂಎ, ಬಿಇಡಿ ಮುಗಿಸಿದ್ದ ಆರೋಪಿ ಕಳೆದ 16 ವರ್ಷಗಳಿಂದ ಗ್ರಾನೈಟ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಹೇರ್ ಡ್ರೈಯರ್ ಒಳಗೆ ಕಲ್ಲುಗಳನ್ನು ಬ್ಲಾಸ್ಟ್ ಮಾಡಲು ಬಳಕೆ ಮಾಡುವ ಡೆಟೋನೇಟರ್ ಹಾಕಿ ಸಂಚು ರೂಪಿಸಿದ್ದ. ಇವನ ದುರಾದೃಷ್ಟಕ್ಕೆ ತನ್ನ ಪ್ರೇಯಸಿಯೇ ಬಲಿಪಶು ಆಗಿದ್ದಾರೆ.