ಈ ಪ್ರತಿಭಾವಂತ ಹುಡುಗಿಯ ವಿದ್ಯಾಭ್ಯಾಸಕ್ಕೆ ಬಿಹಾರದ ಹಳ್ಳಿಯೇ ಮುಂದೆ ನಿಂತಿತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಕೆಯ ಹೆಸರು ಪ್ರಿಯಾಂಶು ಕುಮಾರಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಿಹಾರಕ್ಕೆ ಟಾಪರ್‌ ಆಗಿದ್ದ ಈ ಪ್ರತಿಭಾವಂತ ಬಾಲಕಿ ಆರ್ಥಿಕ ಮುಗ್ಗಟ್ಟುಗಳಿಂದ ವಿದ್ಯಾಭ್ಯಾಸ ಮುಂದುವರೆಸಲಾರದ ಸ್ಥಿತಿಯಲ್ಲಿದ್ದಳು. ಇದನ್ನು ಗಮನಿಸಿದ ಬಿಹಾರದ ಹಳ್ಳಿಗರು ಆಕೆಯ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾವೇ ತೊರುವ ಮೂಲಕ ಬಾಲಕಿಯ ಕನಸಿಗೆ ಬಲ ತುಂಬಿದ್ದಾರೆ. ಇಂತಹದ್ದೊಂದು ಮಾನವೀಯ ಘಟನೆಗೆ ಬಿಹಾರ ಜೆಹಾನಾಬಾದ್‌ ಗ್ರಾಮ ಸಾಕ್ಷಿಯಾಗಿದೆ.
ಗ್ರಾಮದ ಬಾಲಕಿ ಪ್ರಿಯಾಂಶು ಕುಮಾರಿ ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆಯೇ ಓದಿ 10 ನೇ ತರಗತಿ ಪರೀಕ್ಷೆಯಲ್ಲಿ ಇಡೀ ಬಿಹಾರಕ್ಕೆ ಅಗ್ರಸ್ಥಾನ ಗಳಿಸಿದ್ದಾಳೆ. ಪ್ರಿಯಾಂಶು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದಳು. ಕೆಲ ವರ್ಷಗಳ ಹಿಂದೆ ಆಕೆಯ ಅಜ್ಜ ಸಹ ನಿಧನರಾದಾಗ ಕುಟುಂಬವು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಮನೆಗೆ ಆಧಾರವಾಗಿದ್ದ ಇಬ್ಬರು ನಿಧನರಾಗಿದ್ದರಿಂದ ಸಂಸಾರ ನಿರ್ವಹಣೆಯ ಜವಾಬ್ದಾರಿ ಪ್ರಿಯಾಂಶುವಿನ ತಾಯಿ ಶುಭಾ ದೇವಿ ಮತ್ತು ಅಜ್ಜಿ ಸುಮಾತ್ರಾ ದೇವಿಯ ಹೆಗಲ ಮೇಲೆ ಬಿತ್ತು. ಅವರಿಬ್ಬರು ಅಲ್ಲಿ ಇಲ್ಲಿ ಕೆಲಸ ಮಾಡಿ ಬರುತ್ತಿದ್ದ ಸಣ್ಣಪುಟ್ಟ ಆದಾಯಗಳಿಂದಲೇ ಆ ಕುಟುಂಬದ ಸಾಗುತ್ತಿತ್ತು. ಮತ್ತು ಅವರು ಕಷ್ಟಪಟ್ಟು ಹೊಂದಿಸಿದ ಸಣ್ಣಪುಟ್ಟ ಹಣದಲ್ಲೇ ಪ್ರಿಯಾಂಶು ಮತ್ತು ಅವರ ಸಹೋದರಿಯ ಶಿಕ್ಷಣವೂ ನಡೆಯುತ್ತಿತ್ತು. ಇಂತಹ ಕಷ್ಟದಲ್ಲೇ ಬೆಳೆದ ಬಾಲಕಿ ಬಿಹಾರಕ್ಕೆ ಟಾಪರ್‌ ಎನಿಸಿಕೊಂಡಿದ್ದಾಳೆ. ಈ ವೇಳೆ ಆಕೆಯ ಹಿನ್ನೆಲೆ ಬಗ್ಗೆ ಕೆಲವರು ವಿಚಾರಿಸಿದಾಗ ಆಕೆಯ ಕಷ್ಟಗಳು ಬೆಳಕಿಗೆ ಬಂದಿವೆ. ಆಕೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದಂತಹ ಸಂಕಷ್ಟದಲ್ಲಿರುವುದು ಗ್ರಾಮಸ್ಥರ ಅರಿವಿಗೆ ಬಂದಿದೆ. ಬಾಲಕಿಯ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಗ್ರಾಮಸ್ಥರು ಒಗ್ಗಟ್ಟಾಗಿ ಮುಂದೆ ಬಂದಿದ್ದಾರೆ.
ನಿವೃತ್ತ ಯೋಧ ಸಂತೋಷ್ ಕುಮಾರ್ ಪ್ರಿಯಾಂಶು ಹೆಚ್ಚಿನ ಶಿಕ್ಷಣಕ್ಕಾಗಿ ಆಕೆಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಮೊದಲ ವ್ಯಕ್ತಿಯಾಗಿದ್ದು, ಶೀಘ್ರದಲ್ಲೇ ಗ್ರಾಮದ ಅನೇಕರು ಅವರೊಂದಿಗೆ ಸೇರಿಕೊಂಡರು. ಪ್ರಿಯಾಂಶು ಕುಟುಂಬಕ್ಕೆ ನೆರವಾಗಲು ಗ್ರಾಮಸ್ಥರು ಸಮಿತಿಯೊಂದನ್ನು ಸಹ ರಚಿಸಿದ್ದಾರೆ.
ಸಮಿತಿಯು ಅವರ ಶೈಕ್ಷಣಿಕ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಪ್ರಿಯಾಂಶು ಅವರ ಕನಸಿನ ರೆಕ್ಕೆಗಳನ್ನು ಜೋಡಿಸಲು ಸಾಧ್ಯವಿರುವಂತಹ ಎಲ್ಲ ಸಹಾಯವನ್ನು ಮಾಡುವುದಾಗಿ ಗ್ರಾಮಸ್ಥರು ಭರವಸೆಯಿತ್ತಿದ್ದಾರೆ.
ಮುಂದೊಂದು ದಿನ ಐಎಎಸ್ ಅಧಿಕಾರಿಯಾಗಬೇಕು ಎಂಬುದು ನನ್ನ ಗುರಿ. ನನ್ನ ಗುರಿ ಈಗ ತನ್ನದು ಮಾತ್ರವಲ್ಲದೆ ಇಡೀ ಗ್ರಾಮದ ಕನಸಾಗಿದೆ ಎಂದು ಸಂತೋಷದ ಕಣ್ಣೀರಿಡುತ್ತಿದ್ದಾಳೆ ಬಾಲಕಿ ಪ್ರಿಯಾಂಶು ಕುಮಾರಿ. ನನ್ನ ಕನಸುಗಳಿಗೆ ಬೆಂಬಲವಾಗಿ ನಿಂತವರಿಗೆಲ್ಲ ಚಿರರುಣಿ ಎನ್ನುತ್ತಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!