ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಚುನಾವಣೆಗೆ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷವು ಇಂದು ಮಧ್ಯಾಹ್ನ ತನ್ನ ಪಕ್ಷದಿಂದ ಸ್ಪರ್ಧಿಸುವ 51 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಠ್ಯಪುಸ್ತಕಗಳನ್ನು ಬರೆದ ಗಣಿತಜ್ಞ, ಮಾಜಿ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯರು ಸೇರಿದಂತೆ ಹಲವರು ಈ ಬಾರಿ ಸುರಾಜ್ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ.
ಮೊದಲ ಪಟ್ಟಿಯಲ್ಲಿ, ಶೇಕಡಾ 16 ರಷ್ಟು ಅಭ್ಯರ್ಥಿಗಳು ಮುಸ್ಲಿಮರು ಮತ್ತು ಶೇಕಡಾ 17 ರಷ್ಟು ಅತ್ಯಂತ ಹಿಂದುಳಿದ ಸಮುದಾಯವರಿದ್ದಾರೆ.
ಬಿಹಾರಕ್ಕೆ ಹೊಸ ರಾಜಕಾರಣದ ಪರಿಚಯ ಮಾಡಿಕೊಡುವುದಾಗಿ ಭರವಸೆ ನೀಡಿರುವ ಪ್ರಶಾಂತ್ ಕಿಶೋರ್, ಅದರಂತೆ ತಮ್ಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ವಚ್ಛ ಚಾರಿತ್ರ್ಯ ಮತ್ತು ಭ್ರಷ್ಟಾಚಾರ ಆರೋಪರಹಿತ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ಕಾರ್ಗಹರ್ ಅಥವಾ ರಾಘೋಪುರ್ ಕ್ಷೇತಗಳಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಕಾರ್ಗಹರ್ ವಿಧಾನಸಭಾ ಕ್ಷೇತ್ರವು ರೋಹ್ತಾಸ್ ಜಿಲ್ಲೆಯಲ್ಲಿದ್ದು, ಪ್ರಸ್ತುತ ಕಾಂಗ್ರೆಸ್‌ನ ಸಂತೋಷ್ ಕುಮಾರ್ ಮಿಶ್ರಾ ಶಾಸಕರಾಗಿದ್ದಾರೆ. ಅದೇ ರೀತಿ ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಆರ್‌ಜೆಡಿ ಅಧ್ಯಕ್ಷ ತೇಜಸ್ವಿ ಯಾದವ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.