ಹೊಸದಿಗಂತ ವರದಿ, ಮಂಡ್ಯ :
ಎರಡು ಬೈಕ್‌ಗಳಲ್ಲಿ ವ್ಹೀಲಿಂಗ್ ಮಾಡಲು ಹೋಗಿ ನಾಲ್ವರು ಯುವಕರು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ವೆಲ್ಡಿಂಗ್ ಕೆಲಸ ಮಾಡುವ ಸೈಯದ್ ಅಸ್ಲಂ ಪುತ್ರ ಸೈಯದ್ ಶೋಹೆಬ್ (22), ಹೊಳೆಬೀದಿಯ ಸೈಯದ್ ಮಹಮದ್ ಪುತ್ರ ಸೈಯದ್ ಮಜದ್(23), ತಾಲೂಕಿನ ಬೆಸಗರಹಳ್ಳಿಯ ರಿಯಾನ್ ಬೇಗ್ ಪುತ್ರ ಅಯೂಬ್ ಬೇಗ್ (23), ಬೆಳತೂರು ಎಳನೀರು ವ್ಯಾಪಾರಿ ರಮೇಶ್ ಪುತ್ರ ರಾಕೇಶ್(16) ಗಾಯಗೊಂಡವರು.
ಶಿಂಷಾ ನದಿ ಸಮೀಪ ಸರ್ವಿಸ್ ರಸ್ತೆಯಲ್ಲಿ ಉಬ್ಬು ನಿರ್ಮಾಣ ಮಾಡಿದ್ದು, ಬೆಂಗಳೂರಿಗೆ ಹೋಗುತ್ತಿದ್ದ ಇನ್ನೋವಾ ಕಾರು ಚಾಲಕ ಉಬ್ಬು ನಿರ್ಮಾಣದ ಬಳಿ ಕಾರನ್ನು ನಿಧಾನ ಮಾಡಿದ್ದಾನೆ. ಹಿಂದೆಯೇ ಪಟ್ಟಣದ ಕೊಲ್ಲಿ ವೃತ್ತದಿಂದ ನಿಡಘಟ್ಟದ ಕಡೆಗೆ ಎರಡು ಬೈಕ್‌ಗಳಲ್ಲಿ ವೇಗವಾಗಿ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ ಸವಾರರು ಇನ್ನೋವಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ.
ಘಟನೆಯಲ್ಲಿ ನಾಲ್ವರು ಯುವಕರ ತಲೆ, ಮುಖ ಹಾಗೂ ಕೈ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬೈಕ್ ಹಾಗೂ ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿದೆ.
ತಕ್ಷಣವೇ ವಾಹನ ಸವಾರರು ಹಾಗೂ ಸ್ಥಳೀಯರು ಗಾಯಗೊಂಡವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.