ಮೇ 24ಕ್ಕೆ ಜಪಾನ್‌ ನಲ್ಲಿ ʼಕ್ವಾಡ್‌ʼ ಶೃಂಗ ಸಭೆ: ಬಿಡನ್ – ಅಲ್ಬನೀಸ್‌ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಪಾನ್‌ನ ಟೋಕಿಯೊ ನಗರದಲ್ಲಿ ಮೇ 24ರಂದು ನಡೆಯುವ ಕ್ವಾಡ್‌ ರಾಷ್ಟ್ರಗಳ ನಾಯಕರ ಮೂರನೇ ಶೃಂಗಸಭೆಯಲ್ಲಿ ಭಾಗವಹಿಸಲು ಭಾನುವಾರ ಸಂಜೆ ಜಪಾನ್‌ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ” ಜೋ ಬಿಡೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ಆ ಸಭೆಯಲ್ಲಿಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಕುರಿತಾಗಿ ಚರ್ಚೆ ನಡೆಯಲಿದೆ. ಪ್ರಸಕ್ತ ವಿದ್ಯಮಾನಗಳು ಹಾಗೂ ಸಮಕಾಲೀನ ಜಾಗತಿಕ ಸಮಸ್ಯೆಗಳ ಕುರಿತು ನಾವು ಸಂವಾದ ನಡೆಸಲಿದ್ದೇವೆʼ ಎಂದು ಟೋಕಿಯೊ ಭೇಟಿಯ ಕಾರ್ಯಸೂಚಿ ವಿವರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ನೂತನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಕ್ವಾಡ್‌ ಸಮಾವೇಶದಲ್ಲಿ ಅಲ್ಬನೀಸ್ ಅವರನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿಯಾಗಿ ಆಸ್ಟ್ರೇಲಿಯಾದ ನಾಯಕನಿಗೆ ಇದು ಮೊದಲ ಕ್ವಾಡ್ ಶೃಂಗಸಭೆಯಾಗಿದೆ.
“ನಾನು ಅವರೊಂದಿಗೆ (ಅಲ್ಬನೀಸ್) ದ್ವಿಪಕ್ಷೀಯ ಸಭೆಯನ್ನು ಎದುರು ನೋಡುತ್ತಿದ್ದೇನೆ. ಸಭೆಯಲ್ಲಿ ಭಾರತ- ಆಸ್ಟ್ರೇಲಿಯಾ ನಡುವಿನ ಪರಸ್ಪರ ಸಹಕಾರ ಹಾಗೂ ಸಮಾನ ಹಿತಾಸಕ್ತಿಯ ವಿಚಾರಗಳ ಕುರಿತಾಗಿ ಚರ್ಚೆ ನಡೆಸಲಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಪ್ರಧಾನಿ ಮೋದಿ ಟೋಕಿಯೊದಲ್ಲಿ ಇರಲಿದ್ದಾರೆ. ಕ್ವಾಡ್‌ ಶೃಂಗಸಭೆಯಲ್ಲಿ ಭಾಗಿಯಾಗಲು ಮೋದಿಯವರನ್ನು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಆಹ್ವಾನಿಸಿದ್ದರು. “ನನ್ನ ಟೋಕಿಯೊ ಭೇಟಿಯ ಸಮಯದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರಗಳು ಹಾಗೂ ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಮಾತುಕತೆ ನಡೆಯಲಿದೆ ಎಂದು ಮೋದಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಜಪಾನಿನ ವ್ಯಾಪಾರಿ ಸಮುದಾಯ ಮತ್ತು ಭಾರತೀಯ ವಲಸಿಗರ ಬಗ್ಗೆಯೂ ಚರ್ಚೆಗಳು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!