Saturday, March 25, 2023

Latest Posts

ಬಿದಿರು- ಪೈನ್ ಮರದಿಂದ ಜೈವಿಕ ಶಕ್ತಿಯುತ್ಪಾದನೆ: ಪ್ರಥಮ‌‌ ಪ್ರಯೋಗಕ್ಕೆ ಸಿದ್ಧವಾಗಿದೆ ಹಿಮಾಚಲ ಪ್ರದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹವಾಮಾನ ಬದಲಾವಣೆ ಕಾರಣಗಳಿಂದ ಭಾರತವು ಪಳೆಯುಳಿಕೆ ಇಂಧನಗಳಿಗೆ ಪರ್ಯಾಯ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡುತ್ತಿರೋ ಸಮಯದಲ್ಲಿ ಹಿಮಾಚಲ ಪ್ರದೇಶವು ಬಿದಿರು, ಪೈನ್‌ ಮರದ ಉತ್ಪನ್ನಗಳಿಂದ ಜೈವಿಕ ಶಕ್ತಿಯುತ್ಪಾದನೆಯ ಮೊದಲ ಪ್ರಯೋಗಕ್ಕೆ ಸಿದ್ಧವಾಗಿದೆ. ಈ ಕುರಿತು ಅಲ್ಲಿನ ಸರ್ಕಾರವು ಇಂಡಿಯನ್‌ ಸ್ಕೂಲ್‌ ಆಫ್‌ ಬಿಸ್ನೆಸ್‌ ನ ಸಹಯೋಗದಲ್ಲಿ ವ್ಯಾಪಾರ ಮಾದರಿಯನ್ನು ಸೃಷ್ಟಿಸಲಿದ್ದು ಜೈವಿಕ ಇಂಧನ ಕ್ಷೇತ್ರದಲ್ಲಿ ಮಹತ್ವವಾದ ಹೆಜ್ಜೆಗಳನ್ನು ಇಡಲಿದೆ.

ಕೊನಿಫೆರಸ್ ಕಾಡುಗಳನ್ನು ಹೆಚ್ಚಾಗಿ ಹೊಂದಿರುವ ಹಿಮಾಚಲ ಪ್ರದೇಶವು ಬಿದಿರಿನ ಮರ ಹಾಗು ಪೈನ್‌ ವೃಕ್ಷದ ಉತ್ಪನ್ನಗಳನ್ನು ಬಳಸಿ ಶಕ್ತಿಯುತ್ಪಾದಿಸಬಲ್ಲ ದಹನ ಅಚ್ಚುಗಳನ್ನು ತಯಾರಿಸಲು ಯೋಜಿಸುತ್ತಿದೆ. ಬಿದಿರು ಹಾಗು ಪೈನ್‌ ಮರದ ಉತ್ಪನ್ನಗಳನ್ನು ಬಳಸಿ ಜೈವಿಕ ಶಕ್ತಿಯುತ್ಪಾದನೆಯ ಮೂಲಕ ಸ್ಥಳೀಯ ಸಮುದಾಯದವರ ಆರ್ಥಿಕ ಅಭಿವೃದ್ಧಿ ಸಾಧಿಸುವ ಗುರಿಯನ್ನೂ ಸರ್ಕಾರ ಹಾಕಿಕೊಂಡಿರುವುದಾಗಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ತಿಳಿಸಿದ್ದು “ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಈ ಉತ್ಪನ್ನವು ಸಂಭಾವ್ಯವ ವಸ್ತುವಾಗಿ ಬಳಕೆಯಾಗಲಿದೆ. ಜೊತೆಗೆ ಇದು ಹೆಚ್ಚಿನ ಕ್ಯಾಲೋರಿಫಿಕ್‌ (ದಹನಶಕ್ತಿ) ಗುಣಗಳನ್ನು ಹೊಂದಿದ್ದು ಗ್ರಾಮೀಣ ಆರ್ಥಿಕತೆಗೂ ಉತ್ತೇಜನ ನೀಡಲಿದೆ” ಎಂದಿದ್ದಾರೆ.

ಹಿಮಾಚಲ ಪ್ರದೇಶದ ಸರ್ಕಾರದೊಂದಿಗೆ ಇಂಡಿಯನ್‌ ಸ್ಕೂಲ್‌ ಆಫ್‌ ಬಿಸ್ನೆಸ್‌ ಇದಕ್ಕೆ ಅಗತ್ಯವಿರುವ ವ್ಯಾಪಾರ ಮಾದರಿಗಳನ್ನು ಹಾಗು ತಂತ್ರಜ್ಞಾನಗಳನ್ನು ಒದಗಿಸಲಿದೆ. ಜೊತೆಗೆ ಬಿದಿರಿನಿಂದ ಜೈವಿಕ ಎಥನಾಲ್‌, ಜೈವಿಕ ಅನಿಲ ಹಾಗು ಜೈವಿಕ ಗೊಬ್ಬರಗಳ ತಯಾರಿಕೆಯ ಯೋಜನೆಗಳನ್ನು ತಯಾರಿಸಲಿದೆ. ಭಾರತ ಸರ್ಕಾರದಿಂದ ಈಗಾಗಲೇ ಜೈವಿಕ ಎಥನಾಲ್‌ ಬಳಕೆಗೆ ಉತ್ತೇಜನ ಸಿಗುತ್ತಿರುವುದರಿಂದ ಈ ಯೋಜನೆ ಮುಂಬರುವ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ. ಮುಂದಿನ ದಿನಗಳಲ್ಲಿ ಖಾಸಗಿ ಹೂಡಿಕೆಗಳನ್ನೂ ಆಕರ್ಷಿಸಲಿದೆ ಎಂದು ಸಿಎಂ ಸುಖು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!