ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಪತ್ತನಂತ್ತಿಟ್ಟ ಜಿಲ್ಲೆಯ ತಿರುವಲ್ಲಾದ ನಿರಣಂ ಎಂಬಲ್ಲಿರುವ ಸರಕಾರಿ ಬಾತುಕೋಳಿ ಸಂವರ್ಧನಾ ಕೇಂದ್ರದಲ್ಲಿ ಹಕ್ಕಿಜ್ವರ ಬಾಸಿರುವುದನ್ನು ತಪಾಸಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಪ್ರದೇಶದ ಭೋಪಾಲ್‌ನ ವೈರಾಲಜಿ ಸಂಸ್ಥೆಯ ನೇತೃತ್ವದಲ್ಲಿ ಪ್ರಯೋಗಾಲಯದಲ್ಲಿ ನಡೆಸಿದ ತಪಾಸಣೆಯಲ್ಲಿ ಹಕ್ಕಿಜ್ವರ ಬಾಸಿರುವುದು ಪತ್ತೆಯಾಗಿದೆ.
ಕಳೆದ ವಾರ ಬಾತುಕೋಳಿ ಸಾಕಣೆ ಕೇಂದ್ರದಲ್ಲಿ ಹಲವು ಬಾತುಕೋಳಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ್ದವು. ನಂತರ ಮಾದರಿಗಳನ್ನು ಪರೀಕ್ಷೆಗಾಗಿ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಕಾಸರಗೋಡು ಸಹಿತ ರಾಜ್ಯದಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲಾಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲು ಕೇರಳ ಸರಕಾರವು ನಿರ್ದೇಶಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮುಂಜಾಗ್ರತೆಗೆ ತಯಾರಿ
ಪತ್ತನಂತ್ತಿಟ್ಟ ಜಿಲ್ಲೆಯಲ್ಲಿ ಹಕ್ಕಿಜ್ವರ ಬಾಸಿರುವುದಾಗಿ ಪ್ರಯೋಗಾಲಯದ ವರದಿಯಲ್ಲಿ ಸ್ಪಷ್ಟಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯ ನಾಲ್ಕು ಕಂದಾಯ ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ಅಕಾರಿಗಳ ಮುಂದಾಳುತ್ವದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸದಂತೆ ಗಮನಿಸಲಾಗುತ್ತಿದೆ.
ಕಾಸರಗೋಡು ಜಿಲ್ಲೆಗೆ ಕೇರಳದ ಇತರ ಜಿಲ್ಲೆಗಳಿಂದ ಪೂರೈಕೆಯಾಗುವ ಕೋಳಿಗಳು ಮತ್ತು ಬಾತುಕೋಳಿಗಳನ್ನು ಪರಿಶೀಲಿಸಿದ ಬಳಿಕ ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಈ ನಿಮಿತ್ತ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಗಡಿಪ್ರದೇಶಗಳಲ್ಲಿ ತಪಾಸಣೆ ನಡೆಸಲು ಯೋಚಿಸಲಾಗಿದೆ. ಹಕ್ಕಿಜ್ವರ ತಗುಲಿದ ಕೋಳಿಗಳನ್ನು ಕಾಸರಗೋಡು ಜಿಲ್ಲೆಯೊಳಗೆ ಸಾಗಾಟ ಮಾಡದಂತೆ ಅತೀವ ಜಾಗರೂಕತೆ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಂಯೋಜನೆಯಲ್ಲಿ ಅಗತ್ಯವಿದ್ದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.