ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಹಕ್ಕಿಜ್ವರದ ಭೀತಿ ಎದುರಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರದಿಂದ ಬಳಲುತ್ತಿದ್ದ ಕೋಳಿಗಳು ಮೃತಪಟ್ಟಿವೆ.
ವರದಹಳ್ಳಿ ಗ್ರಾಮದ ನಾಟಿ ಕೋಳಿಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ.ರೈತ ದ್ಯಾವಪ್ಪ ಎಂಬುವರಿಗೆ ಸೇರಿದ 23 ಕೋಳಿಗಳು ಮೃತಟ್ಟಿದ್ದವು. ಬಳಿಕ ಅದೇ ಗ್ರಾಮದ ರತ್ನಮ್ಮಗೆ ಸೇರಿದ 5 ಕೋಳಿಗಳು ಮೃತಟ್ಟಿದ್ದವು. ಇದರಿಂದ ಆತಂಕಗೊಂಡ ದ್ಯಾವಪ್ಪ ಹಾಗೂ ರತ್ನಮ್ಮ ಯಾರೊ ಕೋಳಿಗಳಿಗೆ ವಿಷ ಉಣಿಸಿರಬಹುದು ಎಂದು ಅಂದುಕೊಂಡಿದ್ದರು.
ಆದರೆ ಪಶುಪಾಲಾನಾ ಇಲಾಖೆಯ ವೈದ್ಯರು ಪರಿಶೀಲನೆ ನಡೆಸಿ ಮೃತ ಕೋಳಿಗಳ ಸ್ಯಾಂಪಲ್ ಅನ್ನು ಸಂಗ್ರಹಿಸಿ ಹೆಬ್ಬಾಳದಲ್ಲಿನ ಭಾರತೀಯ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಗೆ ರವಾನಿಸಿದರು. ಲ್ಯಾಬ್ ವರದಿಯಲ್ಲಿ ಕೋಳಿಗಳ ಸಾವಿಗೆ ಹಕ್ಕಿಜ್ವರವೇ ಕಾರಣ ಎಂದು ಧೃಡವಾಗಿದೆ.
ಭಾರತೀಯ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಯ ಲ್ಯಾಬ್ ವರದಿ ಕೈ ಸೇರುತ್ತಿದ್ದಂತೆ, ಜಿಲ್ಲಾ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಸ್ವಚ್ಚತೆ, ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡಿರುವ ಕೋಳಿ ಪಾರ್ಮ್ಗಳಲ್ಲಿ ಮುಂಜಾಗೃತೆ ಕೈಗೊಳ್ಳಲು ಮನವಿ ಮಾಡಿದ್ದಾರೆ. ಕೆಲ ದಿನಗಳ ವರೆಗೆ ಚಿಕನ್ ತಿನ್ನದಂತೆ ಡಿಸಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.