November 14, 2026
Saturday, November 14, 2026
spot_img

ತಮಿಳುನಾಡಿನಲ್ಲಿ ಹಕ್ಕಿಜ್ವರದ ಹಾವಳಿ: 5 ಫಾರ್ಮ್‌ಗಳಲ್ಲಿ 35,647 ಕೋಳಿಗಳ ಮಾರಣಹೋಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಮಾರಕ ಎಚ್5ಎನ್1 ಹಕ್ಕಿಜ್ವರ ದೃಢಪಟ್ಟಿದ್ದು, ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸೋಂಕಿನಿಂದ ಈಗಾಗಲೇ 5 ಫಾರ್ಮ್‌ಗಳಲ್ಲಿ 35,647 ಕೋಳಿಗಳು ಸಾವನ್ನಪ್ಪಿದ್ದು, ವೈರಸ್ ಹರಡುವುದನ್ನು ತಡೆಯಲು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ.

ಹಲವು ಕಡೆಗಳಲ್ಲಿ ತಪಾಸಣೆ

ನವೆಂಬರ್ 13ರಂದು ಕುರಿಂಜಿಪಾಡಿ ತಾಲ್ಲೂಕಿನ ಕೃಷ್ಣಾಪುರಂ ಪಂಚಾಯಿತಿ ವ್ಯಾಪ್ತಿಯ ಕಟ್ಟಿಯಂಕುಪ್ಪಂ ಗ್ರಾಮದ ಕೋಳಿ ಫಾರಂನಲ್ಲಿ ಹಕ್ಕಿಜ್ವರ ಇರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಕ್ಟೋಬರ್ 30ರಂದು ತಿಯಾಗವಲ್ಲಿ ಪಂಚಾಯಿತಿ ವ್ಯಾಪ್ತಿಯ ತಮಣಂಪಟ್ಟಿ ಗ್ರಾಮದ ಕೋಳಿ ಫಾರಂನಲ್ಲಿ ಏಕಾಏಕಿ ಪಕ್ಷಿಗಳು ಸಾವನ್ನಪ್ಪಿದ ಬಳಿಕ ಈ ಸೋಂಕಿನ ಶಂಕೆ ವ್ಯಕ್ತವಾಗಿತ್ತು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪಶುವೈದ್ಯಕೀಯ ತಂಡ ಮಾದರಿಗಳನ್ನು ಸಂಗ್ರಹಿಸಿ ನಮಕ್ಕಲ್‌ನ ಪ್ರಯೋಗಾಲಯಕ್ಕೆ ಕಳುಹಿಸಿತ್ತು.

ಸುತ್ತಮುತ್ತಲಿನ ಕೋಳಿ ಫಾರಂಗಳಲ್ಲಿಯೂ ಕೋಳಿಗಳ ಸಾವಿನ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೋಂಕಿತ ಪ್ರದೇಶವನ್ನು ಪ್ರತ್ಯೇಕ ವಲಯಗಳಾಗಿ ವಿಂಗಡಿಸಿ ನಿಗಾ ವಹಿಸಿದ್ದರು. ನವೆಂಬರ್ 5ರಂದು ಭೋಪಾಲ್‌ನ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆಗೆ ಕಳುಹಿಸಲಾಗಿದ್ದ ಮೃತ ಕೋಳಿಗಳ ಮಾದರಿಗಳಲ್ಲಿ ಎಚ್5ಎನ್1 ವೈರಸ್ ಪತ್ತೆಯಾಗಿದೆ. ಬಳಿಕ ಈರೋಡ್, ನಮಕ್ಕಲ್ ಮತ್ತು ಚೆನ್ನೈನ ಮಾಧವರಂನ ಪ್ರಯೋಗಾಲಯಗಳಲ್ಲಿಯೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗಿದೆ.

ಇದನ್ನೂ ಓದಿ:

ಕೋಳಿ ಸಾಗಣೆಗೆ ನಿರ್ಬಂಧ

ಸೋಂಕು ದೃಢಪಟ್ಟ ಬೆನ್ನಲ್ಲೇ ಕೇಂದ್ರ ಸರ್ಕಾರದ 2021ರ ಮಾರ್ಗಸೂಚಿಗಳ ಪ್ರಕಾರ ಸೋಂಕಿತ ಫಾರಂ ಹಾಗೂ ಅದರ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪಕ್ಷಿಗಳನ್ನು ಕೊಲ್ಲುವ ಪ್ರಕ್ರಿಯೆ ಆರಂಭಿಸಲಾಗಿದೆ. ಕೋಳಿ ಸಾಗಣೆಗೆ ನಿರ್ಬಂಧ ವಿಧಿಸಲಾಗಿದ್ದು, ಫಾರಂಗಳಲ್ಲಿ ಸೋಂಕುನಿವಾರಕ ಸಿಂಪಡಣೆ, ಸ್ವಚ್ಛತೆ ಮತ್ತು ಧೂಮೀಕರಣ ಕಾರ್ಯಗಳು ನಡೆಯುತ್ತಿವೆ. ಜೀವಂತ ಪಕ್ಷಿಗಳಿಗೆ ಔಷಧೋಪಚಾರವನ್ನೂ ನೀಡಲಾಗುತ್ತಿದೆ.

9 ಕ್ಷಿಪ್ರ ಕಾರ್ಯಾಚರಣೆ ತಂಡ

ಜಿಲ್ಲಾಧಿಕಾರಿ ಸಿಬಿ ಆದಿತ್ಯ ಸೆಂಥಿಲ್‌ಕುಮಾರ್ ಅವರು ಒಂಬತ್ತು ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ಮೂರು ತಿಂಗಳವರೆಗೆ ಫಾರಂಗಳಲ್ಲಿ ಹೊಸ ಕೋಳಿಗಳನ್ನು ಸಾಕಬಾರದು ಎಂದು ಸೂಚಿಸಲಾಗಿದೆ.

ಸದ್ಯ ಸೋಂಕು ನಿಗದಿತ ಪ್ರದೇಶಕ್ಕೆ ಸೀಮಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಪಕ್ಷಿಗಳ ಅಸಹಜ ಸಾವು ಕಂಡುಬಂದರೆ ತಕ್ಷಣ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Must Read

Skip to toolbar