November 14, 2026
Saturday, November 14, 2026
spot_img

‘ನಿಮ್ಮ ಮಗನ ಮದುವೆಯಾದ್ಮೇಲೆ ನನ್ನ ಮಗನ ಮದುವೆ!’ ಆಂಟಿಗೆ ಅಮ್ಮ ಕೊಟ್ಟ ಖಡಕ್ ಕೌಂಟರ್ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕುಟುಂಬದ ಕಾರ್ಯಕ್ರಮಗಳಲ್ಲಿ ಸಂಬಂಧಿಕರು ಕೇಳುವ ವೈಯಕ್ತಿಕ ಪ್ರಶ್ನೆಗಳು ಕೆಲವೊಮ್ಮೆ ಮುಜುಗರಕ್ಕೆ ಕಾರಣವಾಗುತ್ತವೆ. ಅದರಲ್ಲೂ ವಯಸ್ಸಿಗೆ ಬಂದ ಮಕ್ಕಳ ಮದುವೆ ಯಾವಾಗ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಾಮಾನ್ಯ. ಇಂತಹ ಪ್ರಶ್ನೆಗಳಿಗೆ ಕೆಲವರು ಮೌನವಾಗಿದ್ದರೆ, ಇನ್ನು ಕೆಲವರು ತಮಾಷೆಯ ಮೂಲಕವೇ ತಕ್ಕ ಉತ್ತರ ನೀಡುತ್ತಾರೆ. ಇದೀಗ ಮಗನ ಮದುವೆಯ ಬಗ್ಗೆ ಪ್ರಶ್ನಿಸಿದ ಸಂಬಂಧಿಕರಿಗೆ ತಾಯಿಯೊಬ್ಬರು ನೀಡಿದ ಚುರುಕಾದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ರೆಡಿಟ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಕುಟುಂಬದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸ್ವಂತ ಊರಿಗೆ ತೆರಳಿದ್ದಾಗ, ದೂರದ ಸಂಬಂಧಿಕರೊಬ್ಬರು ಮನೆಗೆ ಬಂದಿದ್ದರು. ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಆ ಮಹಿಳೆ ಇದ್ದಕ್ಕಿದ್ದಂತೆ ಮಗನ ಮದುವೆಯ ಪ್ರಸ್ತಾಪ ತೆಗೆದು, ‘ನಿಮ್ಮ ಮಗನಿಗೆ ಯಾವಾಗ ಮದುವೆ ಮಾಡುತ್ತೀರಿ?’ ಎಂದು ತಾಯಿಯನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ಯಾವುದೇ ಮುಜುಗರವಿಲ್ಲದೆ ತಕ್ಷಣ ಪ್ರತಿಕ್ರಿಯಿಸಿದ ತಾಯಿ, ‘ನಿಮ್ಮ ಮಗನ ಮದುವೆಯಾದ ನಂತರ ನಮ್ಮ ಮಗನ ಮದುವೆ ಮಾಡುತ್ತೇವೆ’ ಎಂದು ತಿರುಗೇಟು ನೀಡಿದ್ದಾರೆ. ತಾಯಿಯ ಈ ಉತ್ತರ ಕೇಳಿ ಸಂಬಂಧಿಕರಿಗೆ ಮಾತೇ ಹೊರಡಲಿಲ್ಲ ಎಂದು ಮಗ ತನ್ನ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಅಷ್ಟೇ ಅಲ್ಲ, ಪ್ರಶ್ನೆ ಕೇಳಿದ ಮಹಿಳೆಯ ಮಗನಿಗೇ ಮದುವೆಯಾಗುವ ಆಸಕ್ತಿ ಇರಲಿಲ್ಲವಂತೆ. ಅವರ ತಾಯಿ ನೋಡುತ್ತಿದ್ದ ಮದುವೆ ಸಂಬಂಧಗಳನ್ನೂ ಆತ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ತಮ್ಮ ಕುಟುಂಬದ ವೈಯಕ್ತಿಕ ವಿಚಾರಗಳಲ್ಲಿ ಅನಗತ್ಯವಾಗಿ ತಲೆಹಾಕುವವರಿಗೆ ತಾಯಿ ಸರಿಯಾದ ಉತ್ತರ ನೀಡಿದ್ದಾರೆ ಎಂದು ಮಗ ಸಂತಸ ವ್ಯಕ್ತಪಡಿಸಿದ್ದಾನೆ.

ರೆಡಿಟ್‌ನಲ್ಲಿ ಚರ್ಚೆ ಶುರು:

ಈ ಪೋಸ್ಟ್‌ಗೆ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ತಮ್ಮ ತಾಯಂದಿರು ಕೂಡ ಇಂತಹ ಪ್ರಶ್ನೆಗಳಿಗೆ ತಮಾಷೆಯ ಉತ್ತರ ನೀಡಿ ಸುಮ್ಮನಾಗಿಸುತ್ತಾರೆ ಎಂದಿದ್ದಾರೆ. ಇನ್ನೂ ಕೆಲವರು ವೈಯಕ್ತಿಕ ಜೀವನದ ಬಗ್ಗೆ ಪದೇಪದೆ ಪ್ರಶ್ನಿಸುವ ಸಂಬಂಧಿಕರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಮದುವೆ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರ. ಅದಕ್ಕೆ ಸಮಯ ನಿಗದಿಪಡಿಸುವ ಹಕ್ಕು ಬೇರೆಯವರಿಗಿಲ್ಲ ಎಂಬುದನ್ನು ಈ ತಾಯಿಯ ಹಾಸ್ಯಮಯ ಉತ್ತರ ಮತ್ತೊಮ್ಮೆ ನೆನಪಿಸಿದೆ.

Must Read