ಹೊಸದಿಗಂತ ಬೆಳಗಾವಿ:
ಮಹಾನಗರ ಪಾಲಿಕೆಯ ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಅನುಭವಿಸುತ್ತಿರುವ ನರಕಯಾತನೆ ಹಾಗೂ ಏಜೆಂಟರ ಹಾವಳಿಯ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.
ಮೇಯರ್ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಅಭಯ್ ಪಾಟೀಲ ಅವರು ವಿಷಯ ಪ್ರಸ್ತಾಪಿಸಿ, ತಾಂತ್ರಿಕ ದೋಷ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ಜನರು ಕಚೇರಿಗೆ ಅಲೆದಾಡುವಂತಾಗಿದೆ ಎಂದು ಆಯುಕ್ತರ ಗಮನ ಸೆಳೆದರು. ಶಾಸಕ ಆಸೀಫ್ ಸೇಠ್ ಮಾತನಾಡಿ, ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಏಜೆಂಟರ ಹಾವಳಿಗೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪ್ರಮಾಣಪತ್ರ ವಿತರಣೆಗೆ ಅನಗತ್ಯ ವಿಳಂಬ ಮಾಡದೆ, ಕಾನೂನುಬದ್ಧ ದಾಖಲೆಗಳನ್ನು ಶೀಘ್ರವಾಗಿ ಸ್ವೀಕರಿಸಬೇಕು ಎಂದು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮತ್ತು ಅಭಯ್ ಪಾಟೀಲ್ ಸಲಹೆ ನೀಡಿದರು.
“ಪ್ರತಿ ಪತ್ರಕ್ಕೆ 70 ರೂಪಾಯಿ ಪಡೆಯಲಾಗುತ್ತಿದೆ. ಆದರೆ ಹಳೆಯ ಕಂಪ್ಯೂಟರ್ ಮತ್ತು ಅವಧಿ ಮೀರಿದ ತಂತ್ರಾಂಶದಿಂದ ಕೆಲಸಗಳು ಕುಂಠಿತವಾಗಿವೆ,” ಎಂದು ನಗರಸೇವಕ ರವಿ ಸಾಳುಂಕೆ ಅಸಮಾಧಾನ ವ್ಯಕ್ತಪಡಿಸಿ, ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ, “ಇನ್ಮುಂದೆ ಅರ್ಜಿ ಸ್ವೀಕೃತವಾದ ನಂತರ ಪ್ರಮಾಣಪತ್ರಗಳನ್ನು ನೇರವಾಗಿ ಪೋಸ್ಟಲ್ ಸೇವೆ (ಅಂಚೆ) ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುವುದು,” ಎಂದು ತಿಳಿಸಿದರು. ಅಲ್ಲದೆ, ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಜನಸ್ನೇಹಿ ಆಡಳಿತ ನೀಡುವುದಾಗಿ ಭರವಸೆ ನೀಡಿದರು.



