ಭಾರತಕ್ಕೆ ಸೋಲಿನ ಕಹಿ: ಶ್ರೀಲಂಕಾ ಮುಡಿಗೆ ಮಹಿಳಾ ಏಷ್ಯಾಕಪ್ ಕಿರೀಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ಭಾರತ ವಿರುದ್ಧ ರೋಚಕ ಜಯ ಸಾಧಿಸುವುದರೊಂದಿಗೆ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಲಂಕಾ 19ನೇ ಓವರ್​ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

166 ರನ್‌ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 7 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್​ಗೆ ಅರ್ಧಶತಕಕ್ಕೂ ಹೆಚ್ಚಿನ ಜೊತೆಯಾಟ ಬಂತು. ಶ್ರೀಲಂಕಾ ಪರ ನಾಯಕಿ ಚಾಮರಿ ಅಟಪಟ್ಟು 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 61 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಇವರಲ್ಲದೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಹರ್ಷಿತಾ ಕೂಡ 51 ಎಸೆತಗಳಲ್ಲಿ 69 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಮಹಿಳೆಯರ ಏಷ್ಯಾಕಪ್‌ನ 9 ನೇ ಆವೃತ್ತಿಯಾಗಿದ್ದು, ಈ ಟೂರ್ನಿಯ ಪ್ರತಿ ಫೈನಲ್‌ ಆಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಇದಕ್ಕೂ ಮುನ್ನ ಆಡಿದ 8 ಏಷ್ಯಾಕಪ್ ಫೈನಲ್ ಪಂದ್ಯಗಳಲ್ಲಿ 7 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿದ್ದ ಭಾರತ ಒಮ್ಮೆ ಮಾತ್ರ ಸೋಲನ್ನು ಎದುರಿಸಬೇಕಾಯಿತು. 2018ರಲ್ಲಿ ಬಾಂಗ್ಲಾದೇಶ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿತ್ತು. ಇದಾದ ನಂತರ ಟೀಂ ಇಂಡಿಯಾ ಏಷ್ಯಾಕಪ್ ಪ್ರಶಸ್ತಿ ಗೆಲ್ಲುವುದನ್ನು ತಪ್ಪಿಸಿಕೊಂಡಿರುವುದು ಇದು ಎರಡನೇ ಬಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!