ಬಿಜೆಪಿಯ 42ನೇ ಸಂಸ್ಥಾಪನಾ ದಿನ – ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಸಿಕ್ಕ ದಿಕ್ಸೂಚಿಯೇನು?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಿಜೆಪಿಯ 42ನೇ ಸಂಸ್ಥಾಪನಾ ದಿನದಂದು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನಸಂಘದ ದಿನಗಳಿಂದ ಈವರೆಗೆ ಪಕ್ಷವನ್ನು ಮುನ್ನಡೆಸಿತಂದ ಪೀಳಿಗೆಗಳಿಗೆ ಕೃತಕ್ಷತೆ ಅರ್ಪಿಸಿದರಲ್ಲದೇ, ಪ್ರಸ್ತುತ ಬಿಜೆಪಿ ಏರಿರುವ ಎತ್ತರವನ್ನು ವಿಶ್ಲೇಷಿಸುತ್ತ ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರಿಗಿರುವ ಜವಾಬ್ದಾರಿಯನ್ನು ವಿವರಿಸಿದರು.

ಅವರ ಮಾತಿನ ಪ್ರಮುಖಾಂಶಗಳು ಇಲ್ಲಿವೆ

  1. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಛ್ ದಿಂದ ಕೋಹಿಮಾವರೆಗೆ ಬಿಜೆಪಿಯು ಏಕ ಭಾರತ-ಶ್ರೇಷ್ಠ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ.
  2. ಮೂರು ಕಾರಣಗಳಿಗಾಗಿ ಬಿಜೆಪಿಯ 42ನೇ ಸ್ಥಾಪನಾ ದಿನಾಚರಣೆ ವಿಶೇಷವಾಗಿದೆ. ಮೊದಲನೆಯದಾಗಿ ದೇಶ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿದೆ. ಎರಡನೆಯದಾಗಿ ಜಾಗತಿಕ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದ್ದು, ಇದು ಭಾರತಕ್ಕೆ ನೀಡುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳುವುದಕ್ಕೆ ಬಿಜೆಪಿ ಕಾರ್ಯಕರ್ತ ಶ್ರಮಿಸಬೇಕಿದೆ. ಮೂರನೆಯದಾಗಿ, ಇತ್ತೀಚೆಗೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಮತ್ತೆ ಬಂದಿದೆ. ರಾಜ್ಯಸಭೆಯಲ್ಲಿ ಸದಸ್ಯರ ಸಂಖ್ಯೆ ನೂರು ದಾಟಿದೆ. ಹೀಗಾಗಿ ರಾಷ್ಟ್ರ ಮತ್ತು ಜಾಗತಿಕ ಹಂತಗಳೆರಡರಲ್ಲೂ ಬಿಜೆಪಿ ಕಾರ್ಯಕರ್ತರ ಜವಾಬ್ದಾರಿ ದೊಡ್ಡದು.
  3. ಭಾರತವು ಇವತ್ತು ಜಗತ್ತನ್ನು ಯಾವುದೇ ಹೆದರಿಕೆ-ಹಿಂಜರಿಕೆಗಳಿಲ್ಲದೇ ಎದುರುಗೊಳ್ಳುತ್ತಿದೆ. ಜಗತ್ತು ಎರಡು ಬಣಗಳಲ್ಲಿ ಹಂಚಿಹೋಗಿರುವಾಗ, ಭಾರತ ಮಾತ್ರ ಮಾನವತೆಯ ಪರ ನಿಂತಿದೆ.
  4. ಇವತ್ತು ನಾವು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಾಗೂ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಎರಡರಲ್ಲೂ ಕ್ಷಮತೆ ತೋರಿದ್ದೇವೆ. ಗುರಿಗಳನ್ನು ಹಾಕಿಕೊಳ್ಳುವುದಷ್ಟೇ ಅಲ್ಲ, ಅವುಗಳನ್ನು ಸಾಧಿಸಿಯೂ ತೋರಿಸಿದ್ದೇವೆ.
  5. ಕೋವಿಡ್ ಸವಾಲುಗಳ ಹೊರತಾಗಿಯೂ ಭಾರತ 400 ಬಿಲಿಯನ್ ಡಾಲರುಗಳ ರಫ್ತು ಸಾಧಿಸಿರುವುದು ನಮ್ಮ ಸಾಮರ್ಥ್ಯವನ್ನು ತೋರಿಸುತ್ತಿದೆ.
  6. ಜಗತ್ತು ಸಂಕಷ್ಟಕ್ಕೆ ಸಿಲುಕಿ ತೊಳಲಾಡುತ್ತಿರುವ ಹೊತ್ತಿನಲ್ಲಿ ಭಾರತ ಮಾತ್ರ ತನ್ನ 80 ಕೋಟಿ ಬಡವರಿಗೆ ಉಚಿತ ಪಡಿತರ ನೀಡುತ್ತಿದೆ.
  7. ತುಳಿತಕ್ಕೊಳಗಾದವರು, ಬಡವರು, ಮಹಿಳೆಯರ ಪರ ಕೆಲಸ ಮಾಡುವುದೇ ಬಿಜೆಪಿಯ ಮುಖ್ಯ ಕಾರ್ಯಸೂಚಿ.
  8. ಬಿಜೆಪಿ ವಿರೋಧಿಗಳು ಪರಿವಾರ ಭಕ್ತಿಯಲ್ಲಿ ಮುಳುಗಿದ್ದರೆ, ಬಿಜೆಪಿ ರಾಷ್ಟ್ರಭಕ್ತಿಗಾಗಿ ನಿಂತಿದೆ. ರಾಜಕೀಯ ಪಕ್ಷಗಳಲ್ಲಿ ಪರಿವಾರವಾದವು ಹೇಗೆ ಭ್ರಷ್ಟಾಚಾರಕ್ಕೆ ದಾರಿ ಮಾಡಿ ರಾಷ್ಟ್ರಹಿತ ಕಡೆಗಣಿಸುತ್ತದೆ ಎಂಬುದನ್ನು ಜನರಿಗೆ ತಿಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!