Saturday, June 10, 2023

Latest Posts

ಪಂಜಾಬ್ ಸರ್ಕಾರದ ವಿರುದ್ಧ ಮೇಣದ ಬತ್ತಿ ಹಿಡಿದು ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತರು

ಹೊಸದಿಗಂತ ವರದಿ, ಚಿತ್ರದುರ್ಗ

ಪಂಜಾಬ್‌ನಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲು ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಅಡ್ಡಿಪಡಿಸಿರುವ ಪಂಜಾಬ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಲ್ಲರೂ ತಮ್ಮ ತಮ್ಮ ಕೈಯಲ್ಲಿ ಮೇಣದ ಬತ್ತಿಗಳನ್ನು ಹಿಡಿದು ಪಂಜಾಬ್ ಸರ್ಕಾರದ ವರ್ತನೆಗೆ ಖಂಡನೆ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ ಮಾತನಾಡಿ, ಪಂಜಾಬ್‌ನಲ್ಲಿ ಹುತಾತ್ಮರಾದ ಭಗತ್‌ಸಿಂಗ್ ಮತ್ತಿತರ ಸ್ವಾತಂತ್ರ್ಯ ವೀರರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಲ್ಲಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಅಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಪ್ರತಿಭಟನೆ ನೆಪದಲ್ಲಿ ಪ್ರಧಾನಿ ಅವರ ಪ್ರಯಾಣಕ್ಕೆ ಅಡ್ಡಿ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಪಂಜಾಬ್‌ನಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುವುದಲ್ಲದೇ ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ಗೆ ತೆರಳಿದ್ದರು. ಆದರೆ ಅಲ್ಲಿನ ಕಾಂಗ್ರೆಸ್ ಸರ್ಕಾರ ಪ್ರಧಾನಿ ಅವರ ಪ್ರಯಾಣಕ್ಕೆ ಅಡ್ಡಿ ಮಾಡಿದೆ. ಅಲ್ಲದೇ ಯಾವುದೇ ಭದ್ರತಾ ವ್ಯವಸ್ಥೆ ಮಾಡದೆ ೧೫-೨೦ ನಿಮಿಷಗಳ ಕಾಲ ಮೇಲುಸೇತುವೆಯಲ್ಲೇ ಪ್ರಧಾನಿಯವರು ಸಮಯ ಕಳೆಯುವಂತೆ ಮಾಡಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ಪಂಜಾಬ್ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಗೌರವಿಸುವ ಮೂಲಕ ಕೀಳುಮಟ್ಟದ ಮನಸ್ಥಿತಿಯನ್ನು ಪ್ರದರ್ಶಿಸಿದೆ. ದೇಶದ ಪ್ರಜ್ಞಾವಂತ ಜನರು ಎಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದ್ದಾರೆ. ಪಂಜಾಬ್ ಸರ್ಕಾರ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ದೇಶದ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಕಲ್ಲೇಶಯ್ಯ, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶೈಲಜಾ ರೆಡ್ಡಿ, ನಗರ ಪ್ರಧಾನ ಕಾರ್ಯದರ್ಶಿ ಆರ್.ವೆಂಕಟೇಶ್, ಪಲ್ಲವಿ ಪ್ರಸನ್ನ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಚಂದ್ರಿಕಾ, ರತ್ನಮ್ಮ, ಕವನ ರಾಘವೇಂದ್ರ, ಲೇಪಾಕ್ಷಿ, ಪೂರ್ಣಿಮಾ, ಶೀಲಾ, ಬಸಮ್ಮ, ಭಾರ್ಗವಿ ದ್ರಾವಿಡ್, ನಗರಸಭೆ ಸದಸ್ಯರಾದ ಜಯಣ್ಣ, ಹರೀಶ್, ಶಿವಣ್ಣಾಚಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!