ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಒಟ್ಟು 19 ಮಂದಿಗೆ ಟಿಕೆಟ್ ನೀಡಿದೆ.
ದೇಶದ ಗಮನ ಸೆಳೆದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನ ದೇಬನಾಥ್ ಅವರಿಗೆ ಟಿಕೆಟ್ ನೀಡಿರುವುದು ಪ್ರಮುಖ ಬೆಳವಣಿಗೆ. ಪಾಣಿಹಟಿ ಕ್ಷೇತ್ರದಿಂದ ರತ್ನ ದೇಬನಾಥ್ ಅವರನ್ನು ಕಣಕ್ಕಿಳಿಸಲಾಗಿದ್ದು, ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡುವುದು ಮತ್ತು ರಾಜ್ಯದ ಮಹಿಳೆಯರ ಸುರಕ್ಷತೆಗಾಗಿ ರಾಜಕೀಯಕ್ಕೆ ಪ್ರವೇಶಿಸುತ್ತಿರುವುದಾಗಿ ಅವರು ಈಗಾಗಲೇ ಘೋಷಿಸಿದ್ದರು. ನಂತರ ಬಿಜೆಪಿ ನಾಯಕರೊಂದಿಗೆ ನಡೆದ ಮಾತುಕತೆಯ ಬಳಿಕ ಅವರು ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
ಇದೇ ಪಟ್ಟಿಯಲ್ಲಿ ರತೀಂದ್ರ ನಾಥ್ ಬೋಸ್ ಅವರನ್ನು ಕೂಚ್‌ಬೆಹರ್ ದಕ್ಷಿಣ ಕ್ಷೇತ್ರದಿಂದ, ಡಾ. ಶಂಕರ್ ಗುಚ್ಚೈತ್ ಅವರನ್ನು ಮೇದಿನಿಪುರದಿಂದ ಹಾಗೂ ಬಿಪ್ಲಬ್ ಮಂಡಲ್ ಅವರನ್ನು ಹೌರಾ ಮಧ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.
ಗಮನಾರ್ಹವಾಗಿ, 2024ರ ಆಗಸ್ಟ್‌ನಲ್ಲಿ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಎಂದು ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಇದೀಗ ಆ ಪ್ರಕರಣದ ಸಂತ್ರಸ್ತೆಯ ತಾಯಿಯೇ ಚುನಾವಣಾ ಕಣಕ್ಕಿಳಿದಿರುವುದು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



