ʻಇದು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ದರ್ಬಾರ್ʼ: ಸರಣಿ ಟ್ವೀಟ್‌ ಮೂಲಕ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಕಾಂಗ್ರೆಸ್‌ ಸರಕಾರದ ನೂರು ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ, ಸರ್ಕಾರದ ಸಾಧನೆ ಏನೆಂದು ಪ್ರಶ್ನಿಸಿ ರಾಜ್ಯ ಬಿಜೆಪಿ ಸರಣಿ ಟ್ವೀಟ್‌ ಮೂಲಕ ಹರಿಹಾಯ್ದಿದೆ. ಗ್ಯಾರಂಟಿಗಳ ಪುಂಗಿ ಊದಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಎಡವಿದ್ದೂ ಅಲ್ಲದೆ, ಇಂದಿಗೂ ಅವುಗಳನ್ನು ಸರಿಯಾಗಿ ಜಾರಿ ಮಾಡಿಲ್ಲ. ಗ್ಯಾರಂಟಿಗಳ ಅನುಷ್ಠಾನಕ್ಕೂ ಮೊದಲೇ ರಾಜ್ಯದಲ್ಲಿ ಶುರುವಾಗಿದ್ದು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ದರ್ಬಾರ್. ಉನ್ನತ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಅಧಿಕಾರ ಚಲಾಯಿಸಿದ್ದರು. ಈ ಮೂಲಕ ರಾಜ್ಯದ ಬೊಕ್ಕಸದಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಸಂದಾಯವಾದದ್ದು ಎಷ್ಟು ಎಂಬುದನ್ನು ಎಲ್ಲವನ್ನೂ ತಿಳಿದ ಡಿ.ಕೆ.ಶಿವಕುಮಾರ ಅವರೇ ಹೇಳಬೇಕೆಷ್ಟೇ ಎಂದು ವ್ಯಂಗ್ಯ ಮಾಡಿದೆ. 

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌, ತುಘಲಕ್ ದರ್ಬಾರಿನ ಶತಕದ ಸಂಭ್ರಮದಲ್ಲಿದೆ. ಸಿದ್ದರಾಮಯ್ಯ ಸರ್ಕಾರ ಶತದಿನೋತ್ಸವದಲ್ಲಿ ಸಾಧಿಸಿದ್ದೇನು? ಎಂದು ಪ್ರಶ್ನಿಸಿ, ಹುಡುಕಿದರೆ ನೂರಕ್ಕೂ ಹೆಚ್ಚು ಹಳವಂಡಗಳೇ ಹೆಚ್ಚು. ಅಧಿಕಾರಿಗಳ ದುರುಪಯೋಗ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ, ಶ್ಯಾಡೋ ಸಿಎಂ, ಕಾಸಿಗಾಗಿ ಪೋಸ್ಟಿಂಗ್, ಮರಳು ಮಾಫಿಯಾ, ರೈತರ ಆತ್ಮಹತ್ಯೆ, ಕಲುಷಿತ ನೀರು, ಕಳಪೆ ಆಹಾರ ವಿತರಣೆ, ಉಡುಪಿಯ ಅಮಾನುಷ ಘಟನೆ ಅಬ್ಬಬ್ಬಾ ‌ಒಂದಾ ಎರಡಾ ಭಂಡ ಕಾಂಗ್ರೆಸ್ಸಿನ 100 ಕರ್ಮ ಕಾಂಡಗಳು ತೆರೆಯುತ್ತವೆ ಎಂದಿದೆ. 

ಸುರ್ಜೇವಾಲಾ ಗಂಟು ತೆಗೆದುಕೊಂಡು ದೆಹಲಿ ಫ್ಲೈಟ್ ಹತ್ತುತ್ತಿದ್ದಂತೆ, ಅಸಲಿ ಆಟ ಶುರುವಿಟ್ಟುಕೊಂಡಿದ್ದು ಸಿದ್ದರಾಮಯ್ಯ ಜೊತೆಗೆ ಅವರ ಸುಪುತ್ರ ಯತೀಂದ್ರ. ಒಂದೇ ಹುದ್ದೆಗೆ ನಾಲ್ಕು ಅಧಿಕಾರಿಗಳಿಗೆ ಶಿಫಾರಸ್ಸು ಪತ್ರಗಳನ್ನು ಕೊಟ್ಟು ದುರುಪಯೋಗ ಮಾಡಿಕೊಂಡಿದ್ದಲ್ಲದೆ, ಕಾಸಿಗಾಗಿ ಪೋಸ್ಟಿಂಗ್ ದಂಧೆ ರಾಜ್ಯದಲ್ಲಿ ಹೊಸ ಅನಧಿಕೃತ ಉದ್ಯಮವನ್ನೇ ಶುರು ಮಾಡಿತು.

ಎಲ್ಲರಿಗೂ ಫ್ರೀ ಎಂದ ಸಿದ್ದರಾಮಯ್ಯ, ಕೊನೆಗೆ ಕಂಡೀಷನ್ ಅಪ್ಲೈ ಎಂಬ ಬಾಣವನ್ನು ಬಿಟ್ಟಿದ್ದಾರೆ. ಅಕ್ಕಿ ಕೊಡಲು ಕೈಲಾಗದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಶಕ್ತಿ ಯೋಜನೆಯಿಂದ ತೊಂದರೆಗೀಡಾಗಿದ್ದು ಸರ್ಕಾರವಲ್ಲ ಬದಲಿಗೆ ಜನ ಎಂದು ಆಕ್ರೋಶ ಹೊರಹಾಕಿದೆ. ಗೃಹಜ್ಯೋತಿ ಹೆಸರಲ್ಲಿ ಜನರಿಗೆ ಕರೆಂಟ್‌ ಏರಿಕೆ ಶಾಕ್‌, ಮಳೆ ಇಲ್ಲದಿದ್ದರೂ ರೈತರ ಗೋಳು ಕೇಳೋದು ಬಿಟ್ಟು ತಮಿಳುನಾಡಿಗೆ ನೀಡು ಬಿಟ್ಟಿದ್ದಾರೆಂಬ ಮೊದಲಾದ ಅಸ್ತ್ರಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಸರಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!